ಬೆಳಗಾವಿ :ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಬಿಜೆಪಿ, ಜೆಡಿಎಸ್ ನಾಯಕರು ಟೀಕಿಸುತ್ತಿದ್ದಾರೆ. ಆದರೆ, ಬರುವ 2024ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರ ಕಳೆದುಕೊಳ್ಳಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಭವಿಷ್ಯ ನುಡಿದಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಂವಿಧಾನ ಬದ್ಧವಾಗಿ ನಮ್ಮ ಸರ್ಕಾರ ರಚನೆ ಆಗಿದೆ. ಸರ್ಕಾರ ಹೇಗೆ ಪತನ ಆಗಲಿದೆ ಎಂಬ ಬಗ್ಗೆ ಅವರನ್ನೇ ನೀವು ಕೇಳಬೇಕು. ಟಾರ್ಗೆಟ್ ಮಾಡೋದರಲ್ಲಿ ಬಿಜೆಪಿಯವರು ನಿಸ್ಸೀಮರು. ದೇಶದಲ್ಲಿ 10 ವರ್ಷದಲ್ಲಿ ಬಿಜೆಪಿಯವರು 11 ಸರ್ಕಾರಗಳನ್ನು ಬೀಳಿಸಿದ್ದಾರೆ. ಸಾವಿರಕ್ಕೂ ಹೆಚ್ಚು ಶಾಸಕರನ್ನು ಖರೀದಿ ಮಾಡಿದ್ದಾರೆ. ಆದರೆ, ಈ ಬಾರಿ ಹಾಗಾಗುವುದಿಲ್ಲ. 2024ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇರುವುದಿಲ್ಲ ಎಂದರು.
ಕಳೆದ 10 ವರ್ಷಗಳಲ್ಲಿ ಮೋದಿ, ಬಿಜೆಪಿ ನಾಯಕರಿಗೆ ಲಾಭವಾಗಿದೆಯೇ ವಿನಃ ಯಾವೊಬ್ಬ ರೈತ, ಜನಸಾಮಾನ್ಯರಿಗೆ ಲಾಭವಾಗಿಲ್ಲ. ನೋಟು ಅಮಾನ್ಯದಿಂದ ಲಕ್ಷ ಲಕ್ಷ ಸಾಲ ತೆಗೆದುಕೊಂಡವರಿಗೆ ಲಾಭವಾಗಿದೆ. ಸಣ್ಣ ಕೈಗಾರಿಕೆಯವರಿಗೆ ಲಾಭವಾಗಿಲ್ಲ. ಶಿಕ್ಷಣ ಕ್ಷೇತ್ರದಲ್ಲಿಯೂ ಜಿಎಸ್ ಟಿ ಜಾರಿಗೆ ತಂದು ಸಾಮಾನ್ಯ ಜನರ ಮಕ್ಕಳು ಶಿಕ್ಷಣ ಪಡೆಯಲು ಪರದಾಡುವ ಸ್ಥಿತಿ ನಿರ್ಮಿಸಿದ್ದಾರೆ. ಬಿಜೆಪಿಯವರಿಗೆ ಒನ್ ನೇಷನ್-ಒನ್ ಇಂಡಿಯಾ, ಇಂಡಿಯಾ ಬದಲು ಭಾರತ ಹೆಸರು ನಾಮಕರಣ ಬಿಟ್ಟರೆ, ಅವರ ಬಳಿ ಬೇರೆ ಯಾವುದೇ ವಿಷಯವಿಲ್ಲ ಎಂದು ವಾಗ್ದಾಳಿ ನಡೆಸಿದರು. ಲೋಕಸಭಾ ಚುನಾವಣೆಗೆ ಹಾಲಿ ಸಚಿವರಿಗೆ ಕಾಂಗ್ರೆಸ್ ಟಿಕೆಟ್ ಕೊಡುವ ಬಗ್ಗೆ ಸ್ಥಳೀಯ ನಾಯಕರು ಹಾಗೂ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಸಂತೋಷ ಲಾಡ್ ಇದೇ ವೇಳೆ ತಿಳಿಸಿದರು.