ಕರ್ನಾಟಕ

karnataka

By

Published : Dec 22, 2021, 4:26 AM IST

ETV Bharat / state

ವಿವಾದಾತ್ಮಕ ಕಾಯ್ದೆಗಳಿಂದಲೇ ಸದ್ದು ಮಾಡಿದ ಬಿಜೆಪಿ ಸರ್ಕಾರ!

ಈ ಎರಡೂವರೆ ವರ್ಷದ ಆಡಳಿತಾವಧಿಯಲ್ಲಿ ವಿವಾದಾತ್ಮಕ ಕಾಯ್ದೆಗಳಿಂದಲೇ ಬಿಜೆಪಿ ಸರ್ಕಾರ ಸದ್ದು ಮಾಡುತ್ತಲೇ ಬಂದಿದೆ.

BJP State Government, BJP State Government controversy bills, BJP State Government news, ಬಿಜೆಪಿ ರಾಜ್ಯ ಸರ್ಕಾರ, ಬಿಜೆಪಿ ರಾಜ್ಯ ಸರ್ಕಾರದ ವಿವಾದಾತ್ಮಕ ಮಸೂದೆಗಳು, ಬಿಜೆಪಿ ರಾಜ್ಯ ಸರ್ಕಾರ ಸುದ್ದಿಗಳು,
ವಿವಾದಾತ್ಮಕ ಕಾಯ್ದೆಗಳಿಂದಲೇ ಸದ್ದು ಮಾಡಿದ ಬಿಜೆಪಿ ಸರ್ಕಾರ

ಬೆಳಗಾವಿ:ಬಿಜೆಪಿ ಸರ್ಕಾರ ಇದೀಗ ವಿವಾದಾತ್ಮಕ ಮತಾಂತರ ನಿಷೇಧ ವಿಧೇಯಕವನ್ನು ಮಂಡನೆ ಮಾಡಿದೆ. ಕ್ಷಿಪ್ರ ರಾಜಕೀಯ ಬದಲಾವಣೆಯೊಂದಿಗೆ ರಾಜ್ಯದ ಗದ್ದುಗೆ ವಹಿಸಿಕೊಂಡ ಎರಡೂವರೆ ವರ್ಷಗಳಲ್ಲಿ ಬಿಜೆಪಿ ಸರ್ಕಾರ ಕೆಲ ವಿವಾದಾತ್ಮಕ ಕಾಯ್ದೆಗಳನ್ನು ಜಾರಿಗೆ ತಂದಿದೆ. ಅದರ ಮೇಲೊಂದು ನೋಟ ಇಲ್ಲಿದೆ.

ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಒಂದೊಂದಾಗಿ ವಿವಾದಾತ್ಮಕ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ. ತಮ್ಮ ಹಿಂದೂ ಅಜೆಂಡಾದ ಚಿಂತನೆಯೊಂದಿಗೆ ಕೆಲ ವಿವಾದಾತ್ಮಕ ಕಾಯ್ದೆಗಳನ್ನು ಜಾರಿಗೆ ತಂದಿದ್ದರೆ, ಇನ್ನು ಕೆಲ ಇತರ ವಿವಾದಾತ್ಮಕ ಕಾಯ್ದೆಗಳನ್ನು ಜಾರಿಗೆ ತಂದಿದೆ.‌ ಪ್ರತಿಪಕ್ಷಗಳ ತೀವ್ರ ವಿರೋಧದ ಮಧ್ಯೆ ಬಿಜೆಪಿ ಸರ್ಕಾರ ವಿವಾದಿತ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ. ಗೋಹತ್ಯೆ ನಿಷೇಧ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ತಂದ ಬಳಿಕ ಇದೀಗ ಮತಾಂತರ ನಿಷೇಧ ವಿಧೇಯಕವನ್ನು ಮಂಡನೆ ಮಾಡಿದೆ.

ವಿವಾದಿತ ಎಪಿಎಂಸಿ ತಿದ್ದುಪಡಿ ಕಾಯ್ದೆ:ಯಡಿಯೂರಪ್ಪ ಸಿಎಂ ಆಗಿದ್ದಾಗ ರೈತರು ಹಾಗೂ ಪ್ರತಿಪಕ್ಷಗಳ ತೀವ್ರ ವಿರೋಧದ ಮಧ್ಯೆ ಬಿಜೆಪಿ ಸರ್ಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿತ್ತು.

ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ಮಾರಾಟ (ಉತ್ತೇಜನ- ಸೌಲಭ್ಯ) ಕಾಯ್ದೆ (ಕೃಷಿ ಮಾರುಕಟ್ಟೆ ಕಾಯ್ದೆ)ಯಂತೆ ರಾಜ್ಯ ಸರಕಾರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಕಾಯ್ದೆಯನ್ನು ಕಳೆದ ಡಿಸೆಂಬರ್‌ ನಲ್ಲಿ ಜಾರಿಗೊಳಿಸಿದೆ. ಅದರಂತೆ ವರ್ತಕರು ನೇರವಾಗಿ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಹಾಗೆಯೇ ಎಪಿಎಂಸಿ ಪ್ರಾಂಗಣಗಳ ಹೊರಗೆ ನಡೆಯುವ ಕೃಷಿ ಉತ್ಪನ್ನಗಳ ಮಾರಾಟದ ಮೇಲೆ ಸೆಸ್‌ ವಿಧಿಸುವುದನ್ನು ರದ್ದುಪಡಿಸಲಾಗಿದೆ. ಎರಡು ಬಾರಿ ಸುಗ್ರೀವಾಜ್ಞೆ ಹೊರಡಿಸಿ ಕೊನೆಗೆ ವಿಧಾನಮಂಡಲದ ಒಪ್ಪಿಗೆ ಪಡೆದು ಕಾಯಿದೆ ಜಾರಿಯಾಗಿದೆ. ಕಳೆದ ಡಿಸೆಂಬರ್​​ನಲ್ಲಿ ರೈತರ ತೀವ್ರ ವಿರೋಧದ ಮಧ್ಯೆ ರಾಜ್ಯ ಸರ್ಕಾರ ಈ ವಿವಾದಿತ ಕಾಯ್ದೆಯನ್ನು ಜಾರಿಗೆ ತಂದಿತ್ತು.

ಕಾರ್ಮಿಕ ಕಾನೂನು ತಿದ್ದುಪಡಿ:ರಾಜ್ಯ ಸರಕಾರ ಕಾರ್ಮಿಕರ ಪ್ರತಿ ದಿನದ ಕೆಲಸದ ಅವಧಿಯನ್ನು 9 ತಾಸುಗಳಿಂದ 10 ಗಂಟೆಗಳಿಗೆ ಹೆಚ್ಚಳ ಮಾಡಿ 2020ರಂದು ಅಧಿಸೂಚನೆ ಹೊರಡಿಸಿ ಕಾರ್ಮಿಕ ಕಾನೂನಿಗೆ ತಿದ್ದುಪಡಿ ತಂದಿತ್ತು. ಇದು ಕಾರ್ಮಿಕ ವಲಯದಿಂದ ತೀವ್ರ ಆಕ್ಷೇಪಕ್ಕೆ ಕಾರಣವಾಗಿತ್ತು.

ಕೊರೊನಾ ಬಿಕ್ಕಟ್ಟನ್ನು ಸಾರ್ವಜನಿಕ ತುರ್ತು ಪರಿಸ್ಥಿತಿಯಾಗಿ ಪರಿಗಣಿಸಿ ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಿಸಿ ಕೈಗಾರಿಕೆಗಳ ಕಾಯ್ದೆ ಸೆಕ್ಷನ್‌ 5ರಡಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ರಾಜ್ಯ ಸರಕಾರದ ನಿರ್ಧಾರವನ್ನು ಒಪ್ಪದ ಹೈಕೋರ್ಟ್‌, ಅಧಿಸೂಚನೆ ವಾಪಸ್‌ ಪಡೆಯದಿದ್ದರೆ ತಡೆ ನೀಡುವುದಾಗಿ ಎಚ್ಚರಿಕೆ ನೀಡಿತ್ತು. ಇದರಿಂದ ಎಚ್ಚೆತ್ತುಕೊಂಡ ರಾಜ್ಯ ಸರಕಾರವು ತಕ್ಷಣವೇ ಅಧಿಸೂಚನೆಯನ್ನು ಹಿಂಪಡೆದಿತ್ತು.

ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ:ಯಡಿಯೂರಪ್ಪ ಸಿಎಂ ಆಗಿದ್ದಾಗ 2020ರಲ್ಲಿ ರೈತ ಸಂಘಟನೆಗಳ ಪ್ರತಿಭಟನೆ ಹಾಗೂ ಕಾಂಗ್ರೆಸ್‌ನ ತೀವ್ರ ವಿರೋಧದ ನಡುವೆಯೇ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಕಾರ್ಯರೂಪಕ್ಕೆ ತಂದಿತ್ತು.

ಕೃಷಿ ಭೂಮಿ ಖರೀದಿ ಸುಗಮಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿತ್ತು.‌ ಸಾಕಷ್ಟು ಪ್ರತಿರೋಧದ ಮಧ್ಯೆ ಕಾಯ್ದೆಯನ್ನು ಕಾರ್ಯರೂಪಕ್ಕೆ ತರಲಾಗಿತ್ತು.‌ ಕೃಷಿ ಭೂಮಿ ಮಾರಾಟದ ನಿಯಮವನ್ನು ಸಡಿಲಗೊಳಿಸಿ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿತ್ತು. ಆ ಮೂಲಕ ಕೃಷಿ ಭೂಮಿ‌ ಖರೀದಿಗಾಗಿ ಇದ್ದ ಆದಾಯ ಮಿತಿ ತೆಗೆದು ಹಾಕಲಾಗಿತ್ತು.

ಬಿಎಸ್‌ವೈ ಸರ್ಕಾರ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ಗೆ ತಿದ್ದುಪಡಿ ತಂದು, ಕೃಷಿ ಭೂಮಿ ಖರೀದಿಸುವಲ್ಲಿನ ನಿಯಮವನ್ನು ಸಡಿಲಿಸಿ ಕಾಯ್ದೆ ಕಾರ್ಯರೂಪಕ್ಕೆ ತಂದಿದೆ. ಪ್ರಮುಖವಾಗಿ ಹಿಂದಿನ ಕಾಯ್ದೆಯಲ್ಲಿದ್ದ 79(A) ನಿಯಮ ರದ್ದು ಪಡಿಸಲಾಗಿತ್ತು. ಅದರಂತೆ ಕೃಷಿ ಭೂಮಿ ಖರೀದಿಗಾಗಿ ವಿಧಿಸಲಾಗಿದ್ದ 25 ಲಕ್ಷ ರೂ. ಕೃಷಿಯೇತರ ಆದಾಯ ಮಿತಿ ನಿಯಮವನ್ನು ತೆಗೆದು ಹಾಕಲಾಯಿತು. ಜೊತೆಗೆ ಕೃಷಿಯೇತರರು ಕೃಷಿ ಭೂಮಿ ಖರೀದಿಸಲು ನಿರ್ಬಂಧಿಸುವ 79(B) ನಿಯಮವನ್ನೂ ರದ್ದುಪಡಿಸಲಾಯಿತು. ಕಾಯ್ದೆಯಡಿ ನಿಯಮ 63ಕ್ಕೆ ತಿದ್ದುಪಡಿ ತಂದು, ನಾಲ್ಕು ಸದಸ್ಯರಿರುವ ಕುಟುಂಬ 108 ಎಕರೆ ಕೃಷಿ ಭೂಮಿ ಹಾಗೂ ಅದಕ್ಕಿಂತ ಹೆಚ್ಚಿನ ಸದಸ್ಯರು ಹೊಂದಿರುವ ಕುಟುಂಬ 216 ಎಕರೆ ಕೃಷಿ ಭೂಮಿ ಖರೀದಿಸಬಹುದಾಗಿದೆ.

ಗೋಹತ್ಯೆ ನಿಷೇಧ ಕಾಯ್ದೆ:ಯಡಿಯೂರಪ್ಪ ಸಿಎಂ ಆಗಿದ್ದಾಗ ಬಿಜೆಪಿ ಸರ್ಕಾರ ಜಾರಿಗೆ ತಂದ ಮತ್ತೊಂದು ವಿವಾದಾತ್ಮಕ ಕಾಯ್ದೆ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020.

ಈ ಕಾಯ್ದೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು‌. ಕಾಂಗ್ರೆಸ್ ವಾಕೌಟ್ ಮಧ್ಯೆ ಬಿಜೆಪಿ ಈ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತ್ತು. ಅದರಂತೆ ಹಸು, ಕರು, ಎಮ್ಮೆ, ಎತ್ತು ಹಾಗೂ 13 ವರ್ಷ ಕೆಳಗಿನ ಕೋಣ ಹತ್ಯೆ ನಿಷೇಧಿಸಲಾಗಿದೆ. ಪ್ರತಿ ಗೋ ಹತ್ಯೆಗೆ 50,000 ರೂ. ದಿಂದ ಗರಿಷ್ಠ ಐದು ಲಕ್ಷ ರೂ.ವರೆಗೆ ದಂಡ ವಿಧಿಸಿದ್ದಲ್ಲದೆ, ಕಾನೂನು ಉಲ್ಲಂಘಿಸಿ ಗೋಹತ್ಯೆ ಮಾಡಿದರೆ 3 ರಿಂದ 7 ವರ್ಷದ ವರೆಗೆ ಜೈಲು ಶಿಕ್ಷೆಯ ಕಾನೂನು ಜಾರಿಗೆ ತಂದಿದೆ. ಕಾಯ್ದೆಯಲ್ಲಿ ಅತಿ ಕಠಿಣ ಕಾನೂನನ್ನು ರೂಪಿಸಲಾಗಿದೆ.

ABOUT THE AUTHOR

...view details