ಕರ್ನಾಟಕ

karnataka

ETV Bharat / state

ಬೆಳಗಾವಿ: ಮಹಿಳೆ ಮೇಲಿನ ದುಷ್ಕೃತ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ - MLA Sunil Kumar

ಸಂತ್ರಸ್ತ ಮಹಿಳೆಯ ವಿವಸ್ತ್ರ ಪ್ರಕರಣ ಖಂಡಿಸಿ ಬಿಜೆಪಿ ಕಾರ್ಯಕರ್ತರು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಬಿಜೆಪಿ ನಾಯಕರು
ಬಿಜೆಪಿ ನಾಯಕರು

By ETV Bharat Karnataka Team

Published : Dec 16, 2023, 9:22 AM IST

ಬೆಳಗಾವಿ:ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣ ಖಂಡಿಸಿ ಚೆನ್ನಮ್ಮ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ವಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಮಹಿಳಾ ಆಯೋಗ, ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಪೊಲೀಸ್ ಇಲಾಖೆಯ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಬಿ ವೈ‌ ವಿಜಯೇಂದ್ರ ಮಾತನಾಡಿ, ಅಧಿವೇಶನದ ಸಂದರ್ಭದಲ್ಲಿ ಪರಿಶಿಷ್ಟ ಪಂಗಡದ ಮಹಿಳೆಯ ಮೇಲೆ ಈ ರೀತಿಯ ಘಟನೆ ನಡೆದಿದೆ. ರಾಜ್ಯ ತಲೆ ತಗ್ಗಿಸುವ ಘಟನೆ ಇದು. ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ವಿವಸ್ತ್ರಗೊಳಿಸಿರುವ ಪ್ರಕರಣ ದೇಶಾದ್ಯಂತ ಚರ್ಚೆ ಆಗ್ತಿದೆ. ದಲಿತರ ಬಗ್ಗೆ ಮೊಸಳೆ ಕಣ್ಣೀರು ಹಾಕ್ತಿರುವ ಸಿಎಂ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ತಾರೆ ಎಂದುಕೊಂಡಿದ್ದೆವು. ಆದರೆ ಅವರನ್ನು ಭೇಟಿಯಾಗುವ ಸೌಜನ್ಯವನ್ನೂ ಸಹ ತೋರಿಲ್ಲ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ತುಘಲಕ್ ದರ್ಬಾರ್​ ನಡೆದಿದೆ. ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ನಾವೆಲ್ಲರೂ ಸೇರಿ ಈ ಘಟನೆ ಖಂಡಿಸಿ ಪ್ರತಿಭಟನೆ ಮಾಡಬೇಕಿದೆ. ಆ ಮೂಲಕ ಎಲ್ಲಾ ಕಾರ್ಯಕರ್ತರೂ ಪ್ರತಿಭಟನೆಯಲ್ಲಿ ಭಾಗಿಯಾಗಿ, ಅನ್ಯಾಯಕ್ಕೊಳಗಾದ ಮಹಿಳೆಗೆ ಪರಿಹಾರ ಹಾಗೂ ನ್ಯಾಯ ಕೊಡಿಸುವ ಕೆಲಸ ಆಗಬೇಕಿದೆ. ಪರಿಶಿಷ್ಟ ಪಂಗಡದ ತಾಯಿಯ ಪರವಾಗಿ ನಾವು ನಿಲ್ಲಬೇಕಿದೆ ಎಂದು ಹೇಳಿದರು.

ಈ ವೇಳೆ ಮಾತನಾಡಿದ ಆರ್ ಅಶೋಕ್, ಸರ್ಕಾರ ಜನರ ರಕ್ಷಣೆಗಾಗಿ ಇಲ್ಲ, ದುಡ್ಡು ಹೊಡೆಯೋಕೆ, ಲೂಟಿ ಮಾಡೋಕೆ ಇದೆ. ಮಹಿಳೆಯರಿಗೆ ರಕ್ಷಣೆ ಕೊಡದಿದ್ದರೆ ಅಧಿವೇಶನ ನಡೆಸಿ ಏನು ಪ್ರಯೋಜನ? ಇಲ್ಲಿರುವುದು ಕುಲಗೆಟ್ಟ ಸರ್ಕಾರ. ಅಧಿವೇಶನ ಇಲ್ಲಿ ಮಾಡಿ ಏನ್ ತಗೊಂಡು ಹೋದ್ರಿ ಸಿದ್ದರಾಮಯ್ಯನವರೇ? ದಲಿತ ಮಹಿಳೆಯನ್ನ ವಿವಸ್ತ್ರಗೊಳಿಸಿದ ಘಟನೆ ಹೊತ್ತು ಒಯ್ತಿದ್ದಿರಾ? ಎಂದು ಹರಿಹಾಯ್ದರು.

ಪ್ರತಿಭಟನೆಯಲ್ಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಶಾಸಕ ಸುನೀಲ್​ಕುಮಾರ್​, ಮಾಜಿ ಶಾಸಕರಾದ ಅನಿಲ್ ಬೆನಕೆ, ಮಹೇಶ ಕುಮಟಳ್ಳಿ, ಸಂಜಯ ಪಾಟೀಲ, ರಾಜ್ಯ ಬಿಜೆಪಿ ವಕ್ತಾರ ಎಂ ಬಿ ಜೀರಲಿ ಸೇರಿ ಮಹಿಳಾ ಕಾರ್ಯಕರ್ತರು ಭಾಗಿಯಾಗಿದ್ದರು.

ಸಂತ್ರಸ್ತ‌ ಮಹಿಳೆಗೆ 5 ಲಕ್ಷ ಪರಿಹಾರ- ಸತೀಶ್ ಜಾರಕಿಹೊಳಿ: ಸಂತ್ರಸ್ತೆಗೆರಾಜ್ಯ ಸರ್ಕಾರದ ವತಿಯಿಂದ ಐದು ಲಕ್ಷ ರೂಪಾಯಿ ಪರಿಹಾರವನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಇದಲ್ಲದೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದಲೂ 50 ಸಾವಿರ ರೂಪಾಯಿ ಪರಿಹಾರವನ್ನು ಘೋಷಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌. ಸೂಕ್ತ ನೆರವು ನೀಡಲು ಕ್ರಮ ತೆಗೆದುಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜಿಲ್ಲಾಧಿಕಾರಿ ಮತ್ತು ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.‌

ಇದನ್ನೂ ಓದಿ:ಮಾನವ ಕುಲ ತಲೆ ತಗ್ಗಿಸುವ ಕೃತ್ಯವಿದು : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ABOUT THE AUTHOR

...view details