ಬೆಳಗಾವಿ : ಹಿಂದೂ ಪದದ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೀಡಿದ್ದ ಹೇಳಿಕೆ ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದ್ದು, ನಗರದಲ್ಲಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ನಡೆಸಲಾಯಿತು.
ನಗರದ ಚನ್ನಮ್ಮಾಜಿ ವೃತ್ತದಿಂದ ಡಿಸಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಮುಖಂಡರು, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪೊಲೀಸರು ಸ್ವಯಂಪ್ರೇರಿತರಾಗಿ ಸತೀಶ ಜಾರಕಿಜೊಳಿ ವಿರುದ್ಧ ಕ್ರಮಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರಿಗೆ ಮನವಿ ಸಲ್ಲಿಸಿದರು.
ಮಹಾತ್ಮರಿಗೆ ಅಪಮಾನ ಮಾಡಿದ್ದಾರೆ: ಬಳಿಕ ಮಾತನಾಡಿದ ಮಾಜಿ ಶಾಸಕ ಸಂಜಯ್ ಪಾಟೀಲ್, ಶಿವಾಜಿ ಮಹಾರಾಜರು, ಡಾ.ಬಾಬಾಸಾಹೇಬ ಅಂಬೇಡ್ಕರ್, ಜಗಜ್ಯೋತಿ ಬಸವೇಶ್ವರ, ಸಂಭಾಜಿ ಮಹಾರಾಜ, ಮಹರ್ಷಿ ವಾಲ್ಮೀಕಿ, ಸುಪ್ರೀಂಕೋರ್ಟ್ಗೆ ಸತೀಶ್ ಜಾರಕಿಹೊಳಿ ಅಪಮಾನ ಮಾಡುತ್ತಿದ್ದಾರೆ. ಹಿಂದು ಸಾಮ್ರಾಜ್ಯ ನಿರ್ಮಾಣ ಮಾಡಿದ್ದ ಶಿವಾಜಿ ಮಹಾರಾಜರಿಗೆ ಅಪಮಾನ ಮಾಡಿರುವ ನೀವು ಮುಂದಿನ ಚುನಾವಣೆಯಲ್ಲಿ ಮನೆಗೆ ಹೋಗಲು ಟಿಕೆಟ್ ಬುಕ್ ಮಾಡಿದ್ದಿರಿ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ: ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಮಾತನಾಡಿ, ದೇಶದಲ್ಲಿ ಅನೇಕ ಮಹಾ ಪುರುಷರಾದ ಸಂತ ತುಕಾರಾಮ್, ಸಂಗೊಳ್ಳಿ ರಾಯಣ್ಣ, ಮಹಾತ್ಮ ಬಸವಣ್ಣ, ಸ್ವಾಮಿ ವಿವೇಕಾನಂದ, ಮಹರ್ಷಿ ವಾಲ್ಮೀಕಿ ಅವರಿಗೆ ಅಪಮಾನ ಮಾಡಿದ್ದಾರೆ. ಈ ಎಲ್ಲ ಮಹಾ ಪುರುಷರು ಹಿಂದೂ ಧರ್ಮ, ಈ ದೇಶದ ಬಗ್ಗೆ ಹೋರಾಟ ಮಾಡಿದವರು. ಇವರೆಲ್ಲ ಹಿಂದುತ್ವವನ್ನು ಬೆಳೆಸುವ ಕೆಲಸ ಮಾಡಿದ್ದಾರೆ. ಮಹಾಪುರುಷರ ಬಗ್ಗೆ ಅಲ್ಪಜ್ಞಾನ ಪ್ರದರ್ಶಿಸಿದ್ದು, ಬಹಳ ದೊಡ್ಡ ಅಪರಾಧ. ಸಮಾಜದಲ್ಲಿ ಒಮ್ಮತ ಮೂಡಿಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಭಾಷೆ, ಧರ್ಮ, ಜಾತಿ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸವನ್ನು ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಕಾಂಗ್ರೆಸ್ ಮಾಡುತ್ತಾ ಬಂದಿದೆ ಎಂದು ವಾಗ್ದಾಳಿ ನಡೆಸಿದರು.
ಬೆಳಗಾವಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ: ಸತೀಶ್ ಜಾರಕಿಹೊಳಿ ಪ್ರತಿಕೃತಿ ದಹಿಸಿ ಆಕ್ರೋಶ ಕಾಂಗ್ರೆಸ್ನಿಂದ ಹಿಂದೂ ವಿರೋಧಿ ನಿಲುವು :ಉತ್ತರ ಶಾಸಕ ಅನಿಲ್ ಬೆನಕೆ ಮಾತನಾಡಿ, ಯಾವಾಗಲೂ ಹಿಂದೂ ವಿರೋಧಿ ಹೇಳಿಕೆಯನ್ನೇ ಕಾಂಗ್ರೆಸ್‍ನವರು ಕೊಡುತ್ತಾ ಬಂದಿದ್ದಾರೆ. ಸತೀಶ್ ಜಾರಕಿಹೊಳಿ ಹಿಂದೂ ಬಗ್ಗೆ ಹೇಳಿರುವುದೇ ಅಶ್ಲೀಲ. ಇದು ಎಲ್ಲಿಂದ ಬಂತು ಎಂದು ಕೇಳಿದ್ರೆ ವಿಕಿಪೀಡಿಯಾ ಮತ್ತು ಗೂಗಲ್ ಎಂದು ಹೇಳುತ್ತಾರೆ. ಗೂಗಲ್ ಮತ್ತು ವಿಕಿಪೀಡಿಯಾದಲ್ಲಿ ಹೋಗಿ ಸತೀಶ್ ಜಾರಕಿಹೊಳಿ ಬಯೋಗ್ರಫಿ ತೆಗೆದರೆ ಅದರಲ್ಲಿ ಹಿಂದೂ ಎಂದು ಬರುತ್ತದೆ. ಜಾತಿ ವಾಲ್ಮೀಕಿ ಎಂದು ಬರುತ್ತದೆ. ರಾಮಾಯಣ ಗ್ರಂಥ ಬರೆದಿರುವ ಮಹರ್ಷಿ ವಾಲ್ಮೀಕಿ ಕೂಡ ಹಿಂದೂ ಎಂಬುದನ್ನು ಮರೆಯಬಾರದು ಎಂದು ಟಾಂಗ್ ನೀಡಿದರು.
ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಸತೀಶ್ ಜಾರಕಿಹೊಳಿ ಕ್ಷಮೆ ಕೇಳುವ ಮೂಲಕ ದೇಶದ ಹಿಂದೂಗಳ ಭಾವನೆಗಳಿಗೆ ಬೆಲೆ ಕೊಡಬೇಕು. ಇಲ್ಲದಿದ್ರೆ ನಿಮಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ :ಸತೀಶ್ ಜಾರಕಿಹೊಳಿ ಹೇಳಿಕೆ ಅಕ್ಷಮ್ಯ ಅಪರಾಧ.. ಬಿ ಎಸ್ ಯಡಿಯೂರಪ್ಪ