ಬೆಳಗಾವಿ : ಇಡೀ ಜಗತ್ತು ಮೆಚ್ಚಿರುವ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅಹಂಕಾರದಿಂದ ಹಗುರವಾಗಿ ಮಾತನಾಡಬಾರದು. ಇದು ನಿಮಗೆ ಶೋಭೆ ತರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಜನವಿರೋಧಿ ಆಡಳಿತ ವಿರುದ್ಧ ಶನಿವಾರ ಬೆಳಗಾವಿ ರಾಣಿ ಚೆನ್ನಮ್ಮ ವೃತ್ತದಲ್ಲಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬೇರೆ ದೇಶಕ್ಕೆ ಹೋದಾಗ ಯಾವುದಾದರೂ ಪ್ರಧಾನಮಂತ್ರಿಗಳ ಕಾಲ ಮುಟ್ಟಿ ನಮಸ್ಕಾರ ಮಾಡಿದ್ದನ್ನು ನೀವು ನೋಡಿದ್ದೀರಾ?. ಈಗ ಮೋದಿಯವರ ಕಾಲು ಮುಟ್ಟಿ ನಮಸ್ಕಾರ ಮಾಡುತ್ತಿದ್ದಾರೆ. ಒಳ್ಳೆ ಕೆಲಸಗಳನ್ನು ಮಾಡುವ ಮೂಲಕ ದೇಶಕ್ಕೆ ಹೆಸರು ತಂದಿದ್ದಾರೆ. ಅಂತವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಇನ್ನೊಮ್ಮೆ ಅಹಂಕಾರದಿಂದ ಮೋದಿಯವರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ, ಅಹಂಕಾರದ ಇನ್ನೊಂದು ರೂಪ ರಾವಣ, ಆ ರಾವಣನ ಹೆಸರನ್ನೇ ನಿಮಗೆ ಇಡಲು ಬಿಜೆಪಿ ಕಾರ್ಯಕರ್ತರು ಹಿಂದೆ ಮುಂದೆ ನೋಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಭಯೋತ್ಪಾದಕರು ಬೆಂಗಳೂರಿಗೆ ಬಂದು ಕುಳಿತಿದ್ದರೂ ನಿರ್ಲಕ್ಷಿಸಿ ವಿಪಕ್ಷ ನಾಯಕರ ಸಭೆಯಲ್ಲಿ ಮಂತ್ರಿಗಳನ್ನು, ಐಎಎಸ್ ಅಧಿಕಾರಿಗಳನ್ನು ನೇಮಿಸುವ ಕೆಟ್ಟ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಿದೆ. ನಮ್ಮ ಬಿಜೆಪಿ ಆಡಳಿತದಲ್ಲಿ ಎಂದೂ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೇಳಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಲಾಗಿದೆ. ಜೈನ ಮುನಿಗಳ ಹತ್ಯೆ, ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್, ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದು, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆದಿದ್ದಿರಿ. ಗೋಹತ್ಯೆ ಆಗಬೇಕು ಎಂಬ ಭಾವನೆ ಇಟ್ಟುಕೊಂಡು ನೀವು ಕೆಲಸ ಮಾಡುತ್ತಿದ್ದಿರಾ..? ನೀವು ಹಿಂದೂ ಹೌದೋ, ಅಲ್ಲವೋ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಶ್ನಿಸಿದರು.