ಬೆಳಗಾವಿ :ಪರಿಷತ್ ಚುನಾವಣೆ ಫಲಿತಾಂಶ ಸಮಾಧಾನ ತಂದಿದೆ. ಆದರೆ, ಸಂಭ್ರಮ ಪಡುವ ಸಂಗತಿ ಅಲ್ಲ, ಇದು ಎಚ್ಚರಿಕೆ ಗಂಟೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ತಿಳಿಸಿದರು.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಬೆಳಗಾವಿ ಹಾಗೂ ಮೈಸೂರಿನಲ್ಲಿ ಎರಡನೇ ಪ್ರಾಶಸ್ತ್ಯದಲ್ಲೂ ಬಿಜೆಪಿ ಅಭ್ಯರ್ಥಿಗಳು ಸೋತಿರೋದು ಇದನ್ನ ಗಮನಿಸಬೇಕಾದ ಸಂಗತಿ. ಇದನ್ನೆಲ್ಲಾ ಗಂಭೀರವಾಗಿ ಆಲೋಚಿಸಬೇಕಾಗುತ್ತದೆ.
ಇದು ಜನಾದೇಶ, ಇದು ದಿಕ್ಸೂಚಿ ಅಂತಾ ಭಾವಿಸಿದ್ರೆ ಅದು ಅವರ ಭ್ರಮೆ. ಇನ್ನೂ ಹೆಚ್ಚಿನ ಸ್ಥಾನ ಗೆಲ್ಲಲು ಅವಕಾಶ ಇತ್ತು. ಕಳೆದ ಬಾರಿ ಆರು ಸ್ಥಾನ ಗೆದ್ದಿದ್ವಿ,ಈಗ 11 ಸ್ಥಾನ ಗೆದ್ದಿದ್ದೇವೆ. ಹೀಗಾಗಿ, ಹೆಚ್ಚು ಸಂಭ್ರಮಿಸುವ ಸಮಯವಲ್ಲ ಎಂದರು.
ಪರಿಷತ್ ಚುನಾವಣೆ ಫಲಿತಾಂಶ ಕುರಿತು ಸಿ ಟಿ ರವಿ ಹೇಳಿಕೆ ರಮೇಶ್ ಜಾರಕಿಹೊಳಿ ಮೇಲೆ ಧಮ್ ಇದ್ರೆ ಕ್ರಮ ಜರುಗಿಸಲಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರಿಗೆ ನಾನು ನಿಮಗೆ ಧಮ್ ಇದ್ದಿದ್ರೆ ಚಾಮುಂಡೇಶ್ವರಿಯಲ್ಲಿ ಸೊಲುತ್ತಿದ್ರೆ ಅಂತಾ ಕೇಳಿದ್ರೆ ಅವರಿಗೆ ನೋವಾಗುತ್ತದೆ. ಹೀಗಾಗಿ, ನಾನು ಅದನ್ನ ಹೇಳೋಕೆ ಹೋಗಲ್ಲ.
ಬೆಳಗಾವಿಯಲ್ಲಿ 13 ವಿಧಾನಸಭೆ ಶಾಸಕರು, ಇಬ್ಬರು ಸಂಸದರು, ಒಬ್ಬರು ರಾಜ್ಯಸಭಾ ಸದಸ್ಯರಿದ್ದರು ಪ್ರತಿಷ್ಠೆಯಾಗಿ ತೆಗೆದುಕೊಳ್ಳಲಿಲ್ಲ ಅನ್ನೋದು ಕಾರ್ಯಕರ್ತರ ಅಭಿಪ್ರಾಯ. ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡರು.
ನಾವು ಪ್ರತಿಷ್ಠೆಯಾಗಿ ತೆಗೆದುಕೊಳ್ಳಲಿಲ್ಲ. ರಮೇಶ್ ಜಾರಕಿಹೊಳಿ ಬಗ್ಗೆ ಎಲ್ಲವೂ ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆ. ಜಿಲ್ಲಾ, ತಾಲೂಕು ಪಂಚಾಯತ್, ಪುರಸಭೆ, ನಗರಸಭೆ ಚುನಾವಣೆಯನ್ನ ಗಂಭೀರವಾಗಿ ತೆಗೆದುಕೊಳ್ಳುವ ಸಂದೇಶ ಇದು ಎಂದರು.
ಬಹುಮತ ಸಾಬೀತಿಗೆ ಲಖನ್ ಹಾಗೂ ಜೆಡಿಎಸ್‌ಗೆ ಬೆಂಬಲ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ರಾಜಕಾರಣ ನಿಂತ ನೀರಲ್ಲ. ರಾಜ್ಯದ ಹಿತಾಸಕ್ತಿ ಹಾಗೂ ಪಕ್ಷದ ಬೆಳವಣಿಗೆ ನೋಡಿಕೊಂಡು ಆಯಾ ಸಂದರ್ಭಕ್ಕೆ ಕ್ರಮಕೈಗೊಳ್ಳಬೇಕಾಗುತ್ತದೆ.
ಕೂಡುವ ಲೆಕ್ಕಕ್ಕೆ ಏನೇನು ಬೇಕು ಅವೆಲ್ಲಾ ಮಾಡುತ್ತೇವೆ. ರಾಜಕೀಯದಲ್ಲಿ ಮರೆಯುವ ಗುಣವೂ ಇರಬೇಕು. ಜನರ ಸಂಪರ್ಕದಿಂದ ಜನಮತ ಸಂಪಾದನೆಯಾಗಬೇಕು. ಮುಂಬರುವ ವಿಧಾನಸಭೆ ಚುನಾವಣೆ ಬಿಜೆಪಿಯ ಗುರಿ ಎಂದು ತಿಳಿಸಿದರು.
ಮತಾಂತರ ಕಾಯ್ದೆ ಜಾರಿ ವಿಚಾರವಾಗಿ ಮಾತನಾಡಿದ ಅವರು, ಮತಾಂತರ ಕಾಯ್ದೆ ಜಾರಿಯಿಂದ ಅಲ್ಪಸಂಖ್ಯಾತರ ರಕ್ಷಣೆಯಾಗಬೇಕು. ಅಲ್ಪಸಂಖ್ಯಾತರು ಮತಾಂತರ ಆದರೆ ಏನು ಮಾಡ್ಬೇಕು. ಹಾಗಾಗಿ, ಅವರ ರಕ್ಷಣೆಗಾಗಿ ಮಾಡುತ್ತೇವೆ. ಅವರ ಧರ್ಮವನ್ನು ಅವರು ಸ್ವತಂತ್ರವಾಗಿ ರಕ್ಷಣೆ ಮಾಡಬಹುದು. ಯಾರು ಭಯ ಪಡುವ ಅವಶ್ಯಕತೆ ಇಲ್ಲ. ಬಲವಂತವಾಗಿ ಮತಾಂತರ ಮಾಡಬಾರದು. ಹೀಗಾಗಿ, ಕಾಯ್ದೆ ತರುತ್ತಿದ್ದೇವೆ.
ಅವರ ಬ್ಯುಸಿನೆಸ್ ಬಂದ್ ಆಗುತ್ತೆ ಅಂತಾ ಕಾಂಗ್ರೆಸ್ ಹೀಗೆ ಹೇಳುತ್ತಿದ್ದಾರೆ. ಕಾಂಗ್ರೆಸ್ಗೂ ಇಂದೊಂದು ಬ್ಯುಸಿನೆಸ್. ಕಾಯ್ದೆ ತರುವುದು ಅಲ್ಪಸಂಖ್ಯಾತರ ಹಿತದೃಷ್ಟಿಯಿಂದ. ಪ್ರಬುದ್ದರು ಈ ಬಗ್ಗೆ ಚರ್ಚೆ ನಡೆಸಲಿ. ಯಾರು ವಿದ್ವಾಂಸರಿದ್ದಾರೆ ಅವರು ಚರ್ಚೆ ಮಾಡಲಿ.
ಹಿಂದೂ ಸನಾತನ ಧರ್ಮದ ಬಗ್ಗೆ ಚರ್ಚೆಯಾಗಲಿ. ಆದ್ರೆ, ಹಣದ ಮೂಲಕ ಬ್ಯುಸಿನೆಸ್ ಮಾಡುವುದು ಸರಿಯಲ್ಲ. ಸಮಾಜದ ಸ್ವಾಸ್ಥ್ಯ ಹಾಗೂ ಹಿತದೃಷ್ಟಿಯಿಂದ ಕಾಯ್ದೆ ತರ್ಲೇಬೇಕು. ಈ ಷಡ್ಯಂತ್ರವನ್ನ ನಾನು ಖಂಡಿಸುತ್ತೇನೆ. ಈ ಕಾಯ್ದೆಯನ್ನ ನಾನು ಸ್ವಾಗತಿಸುತ್ತೇನೆ ಎಂದು ಸಮರ್ಥಿಸಿಕೊಂಡರು.