ಬೆಂಗಳೂರು/ಬೆಳಗಾವಿ: ನಿನ್ನೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಬಿಜೆಪಿ ಶಾಸಕರಾದ ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್, ಹೆಚ್ ವಿಶ್ವನಾಥ್ ಕಾಣಿಸಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ನಗರದ ಹೊರವಲಯದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಈ ಮೂವರು ಶಾಸಕರು ಕಾಣಿಸಿಕೊಂಡಿರುವುದು ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ. ಎಸ್ ಟಿ ಸೋಮಶೇಖರ್ ಸಿಎಲ್ಪಿ (Congress Legislative Party) ಸಭೆಗೆ ಹೋಗಿದ್ದರು ಎನ್ನಲಾಗಿದೆ. ಆ ಮೂಲಕ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುತ್ತಿರುವ ಮೂವರು ಕಾಂಗ್ರೆಸ್ಗೆ ನಿಕಟವಾಗುತ್ತಿದ್ದಾರಾ ಎಂಬ ಪ್ರಶ್ನೆಗಳು ಮೂಡಿವೆ.
ಬಿಜೆಪಿ ಸಭೆಗಳಿಗೆ ಪ್ರಮುಖವಾಗಿ ಎಸ್ ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಗೈರಾಗುತ್ತಿದ್ದಾರೆ. ಆದರೆ ಕಾಂಗ್ರೆಸ್ ಸಭೆ, ಅದರಲ್ಲೂ ಸಿಎಲ್ಪಿ ನಡೆಯುತ್ತಿರುವ ರೆಸಾರ್ಟ್ಗೆ ಹೋಗಿರುವುದು ಅಚ್ಚರಿ ಮೂಡಿಸಿದೆ. ಹೀಗಾಗಿ ಅವರು ಮತ್ತೆ ಕಾಂಗ್ರೆಸ್ ಸೇರಲಿದ್ದರಾ ಎಂಬ ಪ್ರಶ್ನೆ ಬಲವಾಗಿ ಮೂಡಿದೆ. ಒಂದೆಡೆ ಕಾಂಗ್ರೆಸ್ ನಾಯಕರನ್ನು ಪದೇ ಪದೆ ಭೇಟಿ ಮಾಡ್ತಿರುವುದು, ಸದನದಲ್ಲೂ ಸಿಎಂ ಪರ ಬ್ಯಾಟ್ ಬೀಸ್ತಿರುವ ಸೋಮಶೇಖರ್, ನಿನ್ನೆಯ ಕೈನಾಯಕರ ಭೇಟಿ ಮತ್ತಷ್ಟು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಸಭೆಯ ಜೊತೆಗೆ ಅದೇ ರೆಸಾರ್ಟ್ನಲ್ಲಿ ಡಿಕೆಶಿ ಭೋಜನ ಕೂಟವನ್ನೂ ಏರ್ಪಡಿಸಿದ್ದರು. ಈ ಕೂಟಕ್ಕೂ ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್, ಹೆಚ್.ವಿಶ್ವನಾಥ್ ಹಾಜರಾಗಿದ್ದರು.
ಇದೇ ವಿಚಾರವಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಸೋಮಶೇಖರ್, ಶಿವರಾಂ ಹೆಬ್ಬಾರ್, ವಿಶ್ವನಾಥ್ ಎಲ್ಲರೂ ಊಟಕ್ಕೆ ಬಂದಿದ್ದರು. ಬೇರೆ ಪಕ್ಷದ 10 ಶಾಸಕರನ್ನು ಊಟಕ್ಕೆ ಬರಲು ಆಹ್ವಾನಿಸಿದ್ದೆ. ಅವರ್ಯಾರು ಶಾಸಕಾಂಗ ಸಭೆಗೆ ಬಂದಿಲ್ಲ, ಊಟಕ್ಕೆ ಮಾತ್ರ ಬಂದಿರೊದು ಎಂದು ಡಿಸಿಎಂ ಸ್ಪಷ್ಟನೆ ನೀಡಿದರು.