ಬೆಳಗಾವಿ:2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಕಮಲ ಪಾಳೆಯ ಸಜ್ಜುಗೊಳ್ಳುತ್ತಿದೆ. ಈ ಮಧ್ಯೆ ಉನ್ನತ ಸ್ಥಾನದಲ್ಲಿದ್ದಿರುವ ಪಕ್ಷದ ಹಿರಿಯ ನಾಯಕರ ಅಗಲಿಕೆ ಬಿಜೆಪಿಯ ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಬೆಂಗಳೂರು ನಂತರ ಅತಿಹೆಚ್ಚು ವಿಧಾನಸಭೆ ಕ್ಷೇತ್ರ ಹೊಂದಿರುವ ಬೆಳಗಾವಿ ಜಿಲ್ಲೆಯ ಪ್ರಬಲ ನಾಯಕರ ನಿಧನ ಪ್ರಮುಖವಾಗಿ ಬಿಜೆಪಿಗೆ ತುಂಬಲಾರದ ನಷ್ಟವುಂಟು ಮಾಡಿದೆ.
ಅತಿದೊಡ್ಡ ಜಿಲ್ಲೆಯಾಗಿದ್ದರಿಂದ ಬೆಳಗಾವಿಗೆ ಎಲ್ಲ ರಾಜಕೀಯ ಪಕ್ಷಗಳು ಮಹತ್ವದ ಆದ್ಯತೆ ನೀಡುತ್ತವೆ. ಒಂದೂವರೆ ವರ್ಷದ ಹಿಂದೆ ರೈಲ್ವೆ ಇಲಾಖೆ ರಾಜ್ಯ ಸಚಿವರನ್ನು ಕಳೆದುಕೊಂಡಿದ್ದ ಬಿಜೆಪಿ, ಒಂದೂವರೆ ತಿಂಗಳ ಹಿಂದಷ್ಟೇ ರಾಜ್ಯದ ಹಿರಿಯ ನಾಯಕ ಹಾಗೂ ಅರಣ್ಯ ಸಚಿವ ಉಮೇಶ ಕತ್ತಿ ಅವರನ್ನು ಕಳೆದುಕೊಂಡಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ಅವರ ಅಕಾಲಿಕ ನಿಧನ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ. ಚುನಾವಣೆ ವರ್ಷದಲ್ಲೇ ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕರನ್ನು ಕಳೆದುಕೊಂಡಿರುವ ಬಿಜೆಪಿಗೆ ದೊಡ್ಡ ಆಘಾತ ಉಂಟಾಗಿದೆ.
ಅಂಗಡಿ ಸಾವು ಇಡೀ ರಾಜ್ಯಕ್ಕೆ ನಷ್ಟ! ಸಿಮೆಂಟ್ ಉದ್ಯಮಿ ಆಗಿದ್ದ ಸುರೇಶ ಅಂಗಡಿ:ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಮುತ್ಸದ್ಧಿ ರಾಜಕಾರಣಿ. ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ನಾಲ್ಕು ಸಲ ಸಂಸದರಾಗಿದ್ದ ಸುರೇಶ ಅಂಗಡಿ ಅವರು ನರೇಂದ್ರ ಮೋದಿ ಸರ್ಕಾರದಲ್ಲಿ ರೈಲ್ವೆ ಇಲಾಖೆ ರಾಜ್ಯ ಸಚಿವರಾಗಿದ್ದರು. ಅಧಿಕಾರ ವಹಿಸಿಕೊಳ್ಳುತ್ತಿದ್ದನಂತೆ ಈ ಭಾಗದಲ್ಲಿ ನೆನೆಗುದಿಗೆ ಬಿದ್ದಿದ್ದ ರೈಲ್ವೆ ಯೋಜನೆಗಳಿಗೆ ಕಾಯಕಲ್ಪ ಕಲ್ಪಿಸಿದ್ದರು. ಹಲವು ಭಾಗಗಳಲ್ಲಿ ಜೋಡಿ ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡಿದ್ರೆ, ಹುಬ್ಬಳ್ಳಿ, ಬೆಳಗಾವಿ ಸೇರಿ ಕೆಲ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಿದ್ದರು. ತಮ್ಮ ಕಾರ್ಯವೈಖರಿ ಮೂಲಕ ಸುರೇಶ ಅಂಗಡಿ ರಾಜ್ಯದ ಜನ ಅಷ್ಟೇ ಅಲ್ಲ, ಕೇಂದ್ರ ನಾಯಕರ ಗಮನವನ್ನು ಸಹ ಸೆಳೆದಿದ್ದರು. ಬೆಳಗಾವಿ-ಬೆಂಗಳೂರು ವಿಶೇಷ ಹೊಸ ಎಕ್ಸ್ಪ್ರೆಸ್ ರೈಲು ಸೇವೆ ಆರಂಭಿಸಿ ಈ ಭಾಗದ ಜನರ ಮನಸ್ಸನ್ನು ಗೆದ್ದಿದ್ದರು. ತಮ್ಮ ಕೆಲಸದ ಮೂಲಕ ಬಿಜೆಪಿ ವರ್ಚಸ್ಸು ಹೆಚ್ಚಿಸುವ ಜೊತೆಗೆ ಸುರೇಶ ಅಂಗಡಿ ಬೆಳಗಾವಿಗರ ಮನಸ್ಸನ್ನು ಸಹ ಗೆದ್ದಿದ್ದರು. ಕೋವಿಡ್ ಸೋಂಕಿಗೆ ತುತ್ತಾಗಿದ್ದ ಸುರೇಶ ಅಂಗಡಿ ಬಳಿಕ ಚಿಕಿತ್ಸೆ ಫಲಿಸದೇ ದೆಹಲಿಯ ಏಮ್ಸ್‌ನಲ್ಲಿ ಮೃತರಾಗಿದ್ದರು.
ರೈತರ ಹೃದಯ ಗೆದ್ದಿದ್ದ ಕತ್ತಿ:ರಾಜ್ಯ ವಿಧಾನಸಭೆಯಲ್ಲಿ ಅತಿಹೆಚ್ಚು ಸಲ ಗೆದ್ದ ಶಾಸಕ ಎಂಬ ಕೀರ್ತಿಗೆ ಪಾತ್ರರಾದವರು ಉಮೇಶ ಕತ್ತಿ. ಒಂಬತ್ತು ಚುನಾವಣೆಗಳನ್ನು ಎದುರಿಸಿದ್ದ ಉಮೇಶ ಕತ್ತಿ ಎಂಟು ಸಲ ಗೆದ್ದಿದ್ದರು. ಅಲ್ಲದೇ ಬೊಮ್ಮಾಯಿ ಸರ್ಕಾರದಲ್ಲಿ ಅರಣ್ಯ ಮತ್ತು ಆಹಾರ ಸಚಿವರಾಗಿದ್ದರು. ಈ ಮೊದಲು ಬಿಎಸ್‌ವೈ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಉಮೇಶ ಕತ್ತಿ ಚೊಚ್ಚಲ ಕೃಷಿ ಬಜೆಟ್ ಮಂಡಿಸಿ ಹೊಸ ಇತಿಹಾಸ ನಿರ್ಮಿಸಿದ್ದರು.