ಬೆಳಗಾವಿ:ಬೆಳಗಾವಿಯಿಂದ ಆತಂಭಗೊಂಡ ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ ಬಗ್ಗೆ ಬಿಜೆಪಿ ಮುಂಖಡರು ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿ ಸಂಸದೆ ಮಂಗಲ ಅಂಗಡಿ, ಶಾಸಕ ಅನಿಲ್ ಬೆನಕೆ, ಬಿಜೆಪಿ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸಂಜಯ್ ಪಾಟೀಲ್, ರಾಜ್ಯ ಬಿಜೆಪಿ ವಕ್ತಾರ ಎಂ ಬಿ ಜಿರಲಿ ಸೇರಿದಂತೆ ಶುಕ್ರವಾರ ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಕೈ ನಾಯಕರ ವಿರುದ್ಧ ಕೆಂಡ ಕಾರಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗಿಫ್ಟ್ ಪಾಲಿಟಿಕ್ಸ್ ನಡೆಯುತ್ತಿದೆ. ಎಲ್ಲೆಡೆ ಕ್ಯಾಂಟರ್‌ನಲ್ಲಿ ಗಿಫ್ಟ್ ಹಂಚುತ್ತಿದ್ದರೂ ಒಬ್ಬರೂ ಸುದ್ದಿ ಮಾಡುತ್ತಿಲ್ಲ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ್ ಮಾಧ್ಯಮದವರ ಮೇಲೆಯೇ ಗರಂ ಆಗ ಘಟನೆ ನಡೆಯಿತು. ಇದರಿಂದ ಕೆಲಕಾಲ ವಾಗ್ವಾದ ನಡೆಯಿತು. ಆ ಬಳಿಕ ಅವರು ಪತ್ರಕರ್ತರ ಕ್ಷಮೆ ಸಹ ಕೇಳಿದರು.
ಪ್ರಜೆಗಳನ್ನೇ ಮರೆತವರಿಂದ ಪ್ರಜಾಧ್ವನಿ: ಸುದ್ದಿಗೋಷ್ಠಿಯ ಆರಂಭದಲ್ಲಿ ರಾಜ್ಯ ಬಿಜೆಪಿ ವಕ್ತಾರ ಎಂ ಬಿ ಜಿರಲಿ ಮಾತನಾಡಿ, ಹಲವು ವರ್ಷಗಳ ಬಳಿಕ ಕಾಂಗ್ರೆಸ್ ನಾಯಕರಿಗೆ ಪ್ರಜೆಗಳ ನೆನಪಾಗಿದೆ. ಯಾವ ಪ್ರಜಾಧ್ವನಿ ಮರೆತರೋ ಅವರಿಗೆ ಇದೀಗ ಪ್ರಜೆಗಳ ನೆನಪಾಗಿರೋದು ಹಾಸ್ಯಾಸ್ಪದ. ಹಲವು ವರ್ಷಗಳ ಕಾಲ ಕೇಂದ್ರ ಮತ್ತು ರಾಜ್ಯದಲ್ಲಿ ಡಬ್ಬಲ್ ಇಂಜಿನ್, ತ್ರಿಬಲ್ ಇಂಜಿನ್ ಸರ್ಕಾರ ಇತ್ತು. ಆಗಿನಿಂದಲೂ ಈ ಗಡಿ ವಿವಾದ ಇದೆ. ಗಡಿವಿವಾದಕ್ಕೆ ಬೆಂಕಿ ಹಚ್ಚಿದ್ದೇ ಕಾಂಗ್ರೆಸ್. ಪ್ರಜೆಗಳನ್ನೆ ಮರೆತು ಸಂಸತ್‌ನಲ್ಲಿ 40 ಸೀಟ್ಗೆ ಬಂದವರಿಗೆ ಈಗ ಪ್ರಜೆಗಳು ನೆನಪಾಗಿದೆ ಎಂದರು.
ಅಲ್ಪಸಂಖ್ಯಾತರ ಓಲೈಕೆ: ಮಹದಾಯಿ ಯೋಜನೆ ಅನುಷ್ಠಾನ ಬಿಜೆಪಿ ಸರ್ಕಾರ ಮಾಡಿದೆ. ಇವತ್ತು ಡಿ ಕೆ ಶಿವಕುಮಾರ್ ಅವರೇ ಈಗ 200 ಯುನಿಟ್ ವಿದ್ಯುತ್ ಉಚಿತ ಕೊಡುತ್ತೇವೆ ಎಂದು ಹೇಳಿದ್ದಾರೆ. ನೀವು ಇಂಧನ ಸಚಿವರಾಗಿದ್ದಾಗ ಏನು ಮಾಡಿದ್ರಿ? ಚುನಾವಣೆ ಗಿಮಿಕ್ ಮಾಡಲು ಈಗ ಹೇಳಿಕೆ ನೀಡುತ್ತಿದ್ದೀರಿ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ನವರು ಯಾರೂ ಈಗ ಉಳಿದಿಲ್ಲ. ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ಆಗ ನಮ್ಮೆಲ್ಲರ ಹಿರಿಯರು ಪಾಲ್ಗೊಂಡಿದ್ದರು. ನೀವು ಇ.ಡಿ ಗಿರಾಕಿಗಳು. ಭಯೋತ್ಪಾದಕರ ಪರ ಮಾತಾಡುವ ಗಿರಾಕಿಗಳು. ಮಂಗಳೂರು ಕುಕ್ಕರ್ ಸ್ಫೋಟದಲ್ಲಿ ಆರೋಪಿ ಬೆಂಬಲಿಸಿ ಮಾತನಾಡಿದವರು. ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುತ್ತಿರುವವರು ಎಂದು ಜಿರಲಿ ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಸಿ ಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯೆ: ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರ ಬಗ್ಗೆ ಹಗುರವಾಗಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿ ಎಂ ಇಬ್ರಾಹಿಂ ನಾಲ್ಕು ಬಸವಣ್ಣ ವಚನಗಳ ಬಾಯಿಪಾಠ ಮಾಡಿದ್ದಾರೆ. ನಾಲಿಗೆಯನ್ನ ಸ್ವಚ್ಛ ಮಾಡಿಕೊಂಡು ಮಾತನಾಡಬೇಕು. ಯೋಗಿ ಆದಿತ್ಯನಾಥರು ನಾಥಪಂಥದವರು. ರಾಜಕಾರಣ ಮಾತನಾಡುವಾಗ ಹರಕು ಬಾಯಿ ಹರಿಬಿಡಬೇಡಿ. ಗಡಿ ವಿವಾದವನ್ನ ಸೃಷ್ಟಿ ಮಾಡಿದ್ದೆ ಕಾಂಗ್ರೆಸ್ನವರು. ಆಗ ಎಲ್ಲಕಡೆ ಕಾಂಗ್ರೆಸ್ ಸರ್ಕಾರವೇ ಇತ್ತು. ಡಿ ಕೆ ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ಕರ್ನಾಟಕ ಕತ್ತಲೆ ರಾಜ್ಯವಾಗಿತ್ತು. ಉಚಿತ ವಿದ್ಯುತ್ ಕೊಡುವುದಕ್ಕೆ ನಮ್ಮ ವಿರೋಧಿಸುತ್ತಿಲ್ಲ. ಆದ್ರೆ ನೀವು ಇದ್ದಾಗ ಏನು ಮಾಡಿದೀರಿ ಅನ್ನೋದು ನಮ್ಮ ಪ್ರಶ್ನೆ ಎಂದರು.