ಬೆಳಗಾವಿ : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಪ್ತ ಹಾಗೂ ಬಿಜೆಪಿ ಮುಖಂಡನ ಮೇಲೆ ಕೆಲವರು ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಸೋಮವಾರ ಸಂಜೆ ಜಯನಗರದ ಪೃಥ್ವಿ ಸಿಂಗ್ ಅವರ ಮನೆ ಮುಂದೆ ಐದಾರು ಜನರು ಏಕಾಏಕಿ ಬಂದು, ಹೊರಗೆ ಕರೆದೊಯ್ದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪೃಥ್ವಿ ಸಿಂಗ್ ಅವರು ಕೆಲವರ ಜೊತೆಗೆ ಮಾತನಾಡುತ್ತಿರುವುದು ಅವರ ಮನೆ ಬಳಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗಾಯಗೊಂಡ ತಕ್ಷಣ ಪೃಥ್ವಿ ಸಿಂಗ್ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂಎಲ್ಸಿ ಚನ್ನರಾಜ ಹಟ್ಟಿಹೋಳಿ ಹಾಗೂ ಬೆಂಬಲಿಗರೇ ಈ ಘಟನೆಗೆ ಕಾರಣ ಎಂದು ಹಲ್ಲೆಗೊಳಗಾದ ಪೃಥ್ವಿ ಸಿಂಗ್ ಹಾಗೂ ಅವರ ಮಗ ಜಸ್ವೀರ್ ಸಿಂಗ್ ಆರೋಪ ಮಾಡಿದ್ದಾರೆ.
ತನಿಖೆ ಆಗಲಿ ಎಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ : ಹಲ್ಲೆ ಆರೋಪ ರಾಜಕೀಯ ಪ್ರೇರಿತವೋ, ಷಡ್ಯಂತ್ರವೋ ಅಂತ ಕೂಲಂಕಷವಾಗಿ ತನಿಖೆ ಆಗಲಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಬಿಜೆಪಿ ಮುಖಂಡನ ಮೇಲೆ ಚಾಕು ಇರಿತ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಅವರು, ಏನಾಗಿದೆ ಅಂತ ನನಗೆ ಗೊತ್ತಿಲ್ಲ. ಈಗಷ್ಟೇ ಎಸ್ಪಿ ಅವರು ನನ್ನ ಗಮನಕ್ಕೆ ತಂದರು. ನಾನು ತಕ್ಷಣ ನನ್ನ ತಮ್ಮನಿಗೆ ಫೋನ್ ಮಾಡಿದೆ. ಹಾಗೇನಾದರೂ ಇದ್ದರೆ ಅವರು ಪೊಲೀಸ್ ದೂರು ಕೊಡಲಿ ಎಂದರು.