ಬೆಳಗಾವಿ:ವಂಟಮೂರಿ ಪ್ರಕರಣದಲ್ಲಿ ಬಿಜೆಪಿ ಆರೋಪ ಮಾಡುತ್ತಿರುವುದಕ್ಕೆ ತಿರುಗೇಟು ಕೊಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಇದರಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಗೃಹ ಸಚಿವರು ಸ್ಥಳಕ್ಕೆ ಭೇಟಿ ವಿಚಾರಣೆ ಮಾಡಿದ್ದಾರೆ. ಅವರು ಯಾಕೆ ರಾಜೀನಾಮೆ ಕೊಡಬೇಕು.? ಯಾರು ಕೂಡ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಏನು ಮಾಡಬೇಕು ಎಂದು ಸಲಹೆ ನೀಡಲಿ ಎಂದು ತಿಳಿಸಿದ್ದಾರೆ.
ವಂಟಮೂರಿ ಪ್ರಕರಣದಲ್ಲಿ ಬಿಜೆಪಿ ರಾಜಕೀಯ: ಬಿಜೆಪಿ ವಂಟಮೂರಿ ಪ್ರಕರಣಕ್ಕೆ ಹೆಚ್ಚು ಆಸಕ್ತಿ ತೋರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲದರಲ್ಲೂ ಬಿಜೆಪಿ ರಾಜಕೀಯ ಮಾಡ್ತಾರೆ. ಅದಕ್ಕೆ ಉತ್ತರ ಕೂಡಲಾಗಿದೆ. ಅವರು ರಾಜಕೀಯ ಮಾಡ್ತಾರೆ ಎಂದು ನಾವು ಮಾಡಲ್ಲ. ಅಲ್ಲಿ ಆಗಿದ್ದ ಘಟನೆ ಯಾರಿಗೆ ಚೇಂಜ್ ಮಾಡಲು ಸಾಧ್ಯವಿಲ್ಲ. ಇನ್ನೂ ಹತ್ತು ಸಾರಿ ಬಂದ್ರೂ ವಸ್ತು ಸ್ಥಿತಿ ಹಾಗೆ ಇರುತ್ತದೆ.
ಬಿಜೆಪಿಯವರು ಬೆಳಗಾವಿ ಘಟನೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ದೇಶದಲ್ಲಿ ಇಂಥ ಬಹಳಷ್ಟು ಘಟನೆಗಳು ಆಗಿವೆ, ಅಲ್ಲಿಗೂ ಹೋಗಬೇಕು, ಇಲ್ಲಿ ಅಷ್ಟೇ ಬಂದರೆ ಅದು ರಾಜಕೀಯ ಅನಿಸುತ್ತೆ. ಮಣಿಪುರದ ಘಟನೆ ಮೂರು ತಿಂಗಳು ಇಡೀ ಜಗತ್ತೇ ನೋಡಿತ್ತು. ಆದರೂ ಅಲ್ಲಿ ಯಾರು ಹೋಗಲಿಲ್ಲ ಎಂದು ಸತೀಶ ಜಾರಕಿಹೊಳಿ ತಿರುಗೇಟು ಕೊಟ್ಟರು.
ಜಮೀನು ಮಂಜೂರಾತಿ ಪತ್ರ ಹಸ್ತಾಂತರ: ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಗೆ ರಾಜ್ಯ ಸರ್ಕಾರವು 5 ಲಕ್ಷ ರೂ. ಪರಿಹಾರ ಘೋಷಿಸಿರುವ ಹಿನ್ನೆಲೆಯಲ್ಲಿ, ಸಂತ್ರಸ್ತ ಮಹಿಳೆಯ ಕುಟುಂಬಕ್ಕೆ ಪರಿಹಾರ ಚೆಕ್ ಹಸ್ತಾಂತರಿಸಲಾಯಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಸಂತ್ರಸ್ತ ಮಹಿಳೆ ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿದ ಸಚಿವರು, ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸುವ ಕುರಿತು ಭರವಸೆ ನೀಡಿದರು.
ಅಲ್ಲದೇ ಸಂತ್ರಸ್ತ ಕುಟುಂಬಕ್ಕೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಭೂ ಒಡೆತನ ಯೋಜನೆಯಡಿ ಮಂಜೂರಾಗಿರುವ 2.03 ಎಕರೆ ಜಮೀನು ಮಂಜೂರಾತಿ ಆದೇಶ ಪ್ರತಿ ಕೂಡ ಇದೇ ವೇಳೆ ಹಸ್ತಾಂತರಿಸಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಬಸವರಾಜ ಸೇರಿದಂತೆ ಮತ್ತಿತರ ಅಧಿಕಾರಿಗಳು ಇದ್ದರು.