ಬೆಳಗಾವಿ:ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ವಿಧಾನಪರಿಷತ್ ಸೋಲಿನ ಬಳಿಕ ಆಡಳಿತಾರೂಢ ಬಿಜೆಪಿಗೆ ಸ್ಥಳೀಯ ಸಂಸ್ಥೆಗಳ ಫಲಿತಾಂಶ ಶಾಕ್ ನೀಡಿದೆ.
ಅಥಣಿ ಪುರಸಭೆ, ಉಗಾರ್‌ಖುರ್ದ್ ಪುರಸಭೆ ಹಾಗೂ ಮುನವಳ್ಳಿ ಪುರಸಭೆಯಲ್ಲಿ ಕಾಂಗ್ರೆಸ್ ಕೈ ಮೇಲಾಗಿದೆ. ಹಾರೂಗೇರಿ ಹಾಗೂ ಮುಗಳಖೋಡ ಪುರಸಭೆ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
18 ವಿಧಾನಸಭೆ ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಇದರಲ್ಲಿ ಹಾಲಿ ಸರ್ಕಾರದಲ್ಲಿ ಇಬ್ಬರು ಸಚಿವರೂ ಆಗಿದ್ದಾರೆ. ಅಲ್ಲದೇ ಇಬ್ಬರು ಸಂಸದರು, ಓರ್ವ ಪರಿಷತ್ ಸದಸ್ಯ ಹಾಗೂ ಓರ್ವ ರಾಜ್ಯಸಭೆ ಸದಸ್ಯರು ಬಿಜೆಪಿಯವರಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬೆಳಗಾವಿ ಬಿಜೆಪಿಯ ಶಕ್ತಿ ಕೇಂದ್ರ ಎಂದೇ ಬಿಂಬಿತವಾಗಿದೆ. ಹೀಗಿದ್ದರೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಆಗಿರುವ ಹಿನ್ನಡೆ ಕಮಲ ನಾಯಕರನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡಿದೆ.
ಎಲ್ಲಿ ಯಾರ ಬಲ ಎಷ್ಟು?
ಅಥಣಿ ಪುರಸಭೆ ಕಾಂಗ್ರೆಸ್ ಪಾಲಾಗಿದ್ದು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಸವದಿ ಹಾಗೂ ಬಿಜೆಪಿ ಶಾಸಕ ಮಹೇಶ ಕುಮಟಳ್ಳಿ ಮುಖಭಂಗವಾಗಿದೆ. 27 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 15, ಬಿಜೆಪಿ 9 ಹಾಗೂ ಪಕ್ಷೇತರರು ಮೂವರು ಗೆದ್ದಿದ್ದಾರೆ.
ಕಾಗವಾಡ ತಾಲೂಕಿನ ಉಗಾರ್‌ಖುರ್ದ್ ಪುರಸಭೆ ಕಾಂಗ್ರೆಸ್ ತಕ್ಕೆಗೆ ಹೋಗುವ ಸಾಧ್ಯತೆ ಇದೆ. ಮಾಜಿ ಸಚಿವ, ಶಾಸಕ ಶ್ರೀಮಂತ ಪಾಟೀಲಗೆ ಮುಖಭಂಗವಾಗಿದೆ. 23 ಸ್ಥಾನಗಳ ಪೈಕಿ ಕಾಂಗ್ರೆಸ್ 11, ಬಿಜೆಪಿ 7 ಹಾಗೂ ಪಕ್ಷೇತರ 5 ಗೆದ್ದಿದ್ದಾರೆ. ಪಕ್ಷೇತರ ಸದಸ್ಯರ ನೆರವಿನಿಂದ ಇಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ.
ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ಕ್ಷೇತ್ರ ವ್ಯಾಪ್ತಿಯ ಮುನವಳ್ಳಿ ಪುರಸಭೆಯಲ್ಲೂ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. 23 ಸ್ಥಾನಗಳ ಪೈಕಿ ಕಾಂಗ್ರೆಸ್ 11, ಬಿಜೆಪಿ 10 ಹಾಗೂ ಪಕ್ಷೇತರರು 2 ಗೆದ್ದಿದ್ದಾರೆ. ಇಲ್ಲಿ ಪಕ್ಷೇತರರು ನಿರ್ಣಾಯಕರಾಗಲಿದ್ದಾರೆ.