ಚಿಕ್ಕೋಡಿ: ಅಂದಿನ ಡಬಲ್ ಇಂಜಿನ ಸರ್ಕಾರ (ಬಿಜೆಪಿ) ನಿಮ್ಮ ಜೇಬಿಗೆ ಕತ್ತರಿ ಹಾಕಿ ಹಣ ಹೊಡೆದರು. ನಮ್ಮ ಸರ್ಕಾರ ನೀವು ಖರ್ಚು ಮಾಡಬೇಕೆಂದು ನಿಮಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ನೀಡುತ್ತಿದ್ದೇವೆ. ಇಂತಹ ಅವಕಾಶ ನಿಮಗೆ ಎಂದೂ ಬಾರದು. ನಮ್ಮದು ಜನಪರ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಕಟನೂರ ಗ್ರಾಮದಲ್ಲಿಂದು ವಿವಿಧ ಕಾಮಗಾರಿಗಳು ಮತ್ತು ಪಶು ವೈದ್ಯಕೀಯ ಮಹಾವಿದ್ಯಾಲಯ ಉದ್ಘಾಟನೆ ನೆರವೇರಿಸಿ ಸಿಎಂ ಮಾತನಾಡಿದರು. ಅಥಣಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಮಾಡಲಾಗಿದೆ ಎಂದರು.
ಇದೇ ವೇಳೆ, ಲಕ್ಷ್ಮಣ್ ಸವದಿ ಈಗಷ್ಟೇ ಕಾಂಗ್ರೆಸ್ ಪಕ್ಷ ಸೇರಿದವರು. ಸವದಿ ಬಿಜೆಪಿ ಪಕ್ಷದಲ್ಲಿ ಇದ್ದಾಗಲೂ ನನ್ನ ಸ್ನೇಹಿತರು. ಅವರ ಶಕ್ತಿಯಿಂದಲೇ ಹಲವು ಕ್ಷೇತ್ರಗಳಲ್ಲಿ ಶಾಸಕರು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪರವಾಗಿ ಹಾಗೂ ನನ್ನ ಪರವಾಗಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಶಾಸಕರಾಗಿ, ಉಪಮುಖ್ಯಮಂತ್ರಿಯಾಗಿ, ಸಚಿವರಾಗಿ ಅಥಣಿ ಕ್ಷೇತ್ರದಲ್ಲಿ ಹಲವು ಕಾಮಗಾರಿಯನ್ನು ಸವದಿ ಮಾಡಿದ್ದಾರೆ. ಜನಪ್ರತಿನಿಧಿಗಳಾದವರು ಜನರ ಸೇವೆ ಮಾಡಬೇಕು. ಸವದಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿ ಮಾಡಿದ್ದಾರೆ. ಇಷ್ಟು ಕೆಲಸ ಮಾಡಿದರೂ ಸವದಿ ಇನ್ನೂ ನಮ್ಮ ಮುಂದೆ ಹಲವು ಬೇಡಿಕೆಯನ್ನು ಇಟ್ಟಿದ್ದಾರೆ. ಹಂತಹಂತವಾಗಿ ಅವರ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ನಮ್ಮದು ನುಡಿದಂತೆ ನಡೆದ ಸರ್ಕಾರ. ಹಿಂದೆ 165 ಭರವಸೆಯಲ್ಲಿ 158 ಭರವಸೆ ಈಡೇರಿಸಲಾಗಿದೆ. ಸದ್ಯ ಐದು ಗ್ಯಾರಂಟಿ ಯೋಜನೆ ಭರವಸೆ ನೀಡಲಾಗಿದೆ. ಇದರಲ್ಲಿ ಮೂರು ಗ್ಯಾರಂಟಿ ಯೋಜನೆ ಈಡೇರಿಸಲಾಗಿದೆ. ಅನ್ನಭಾಗ್ಯ, ಗೃಹ ಜ್ಯೋತಿ, ಶಕ್ತಿ ಯೋಜನೆ ನೀಡಲಾಗಿದೆ. ಗೃಹ ಲಕ್ಷ್ಮಿ ಯೋಜನೆ ಈ ತಿಂಗಳ ಕೊನೆಯಲ್ಲಿ ಈಡೇರಿಸಲಾಗುವುದು ಮತ್ತು ಇನ್ನುಳಿದ ಎರಡು ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಅಥಣಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ:ಇಂದು ರಾಜ್ಯದ ಆರನೆೇ ಪಶು ವೈದ್ಯಕೀಯ ಮಹಾವಿದ್ಯಾಲಯ ಉದ್ಘಾಟನೆಯನ್ನು ಸಿಎಂ ನೆರವೇರಿಸಿದರು. ಸರಿಸುಮಾರು ಮೂರು ಹಂತದಲ್ಲಿ 86 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಾಲೇಜು ಲೋಕಾರ್ಪಣೆಯಾಗಿದೆ.