ಬೆಳಗಾವಿ : ಚಳಿಗಾಲ ಅಧಿವೇಶನಕ್ಕಿಂತ ಮುಂಚೆ ತುಘಲಕ್ ದರ್ಬಾರ್ನ ರೈತ ವಿರೋಧಿ ಆದೇಶಗಳನ್ನು ವಾಪಸ್ ಪಡೆದು ಮುಖ್ಯಮಂತ್ರಿಗಳು ಬೆಳಗಾವಿಗೆ ಬರಬೇಕು. ಇಲ್ಲದಿದ್ದರೆ ರೈತರು ಅಧಿವೇಶನದ ವೇಳೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ. ಅಲ್ಲದೇ ವಿದ್ಯುತ್ ಖಾತೆ ಬಗ್ಗೆ ಜ್ಞಾನವಿಲ್ಲದ ಕೆ. ಜೆ ಜಾರ್ಜ್ ಅವರನ್ನು ಸಂಪುಟದಿಂದ ಕೈ ಬಿಡುವಂತೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಗ್ರಹಿಸಿದರು.
ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರೈತರ ಸಮಸ್ಯೆಗಳೇ ಗೊತ್ತಿಲ್ಲದ ಕೆ ಜೆ ಜಾರ್ಜ್ ವಿದ್ಯುತ್ ಮಂತ್ರಿ ಆಗಿದ್ದಾರೆ. ಅವರು ಯಾವುದೇ ರೀತಿ ಅಧ್ಯಯನ ಮಾಡಿಲ್ಲ. ಸೋಲಾರ್ ವಿದ್ಯುತ್ ನೀಡುತ್ತೇವೆ ಎನ್ನುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ. 80ರಷ್ಟು ಸಬ್ಸಿಡಿ ನೀಡಿದರೂ ಒಂದು ಲಕ್ಷ ರೂ. ಖರ್ಚಾಗುತ್ತದೆ. ವಿದ್ಯುತ್ ಸಂಪರ್ಕ ಬೇಕಾದರೆ, 25 ಕಿ. ಲೋ. ವ್ಯಾಟ್ ಟಿಸಿ ತೆಗೆದುಕೊಂಡರೆ 1.50 ಲಕ್ಷ ಮತ್ತು 63 ಕಿ.ಲೋ. ವ್ಯಾಟ್ಗೆ 2 ಲಕ್ಷ ಖರ್ಚಾಗುತ್ತದೆ. ಈ ರೀತಿ ತುಘಲಕ್ ದರ್ಬಾರ್ ಸರ್ಕಾರ ರಾಜ್ಯದಲ್ಲಿದೆ. 223 ತಾಲೂಕು ಬರಗಾಲ ಪೀಡಿತವಾಗಿದ್ದರೂ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ. ಜಿಲ್ಲಾಡಳಿತಕ್ಕೆ ಒಂದು ರೂ. ಬಿಡುಗಡೆಯಾಗಿಲ್ಲ. 200 ರೈತರೂ ಆತ್ಮಹತ್ಯೆ ಮಾಡಿಕೊಂಡರೂ ರೈತರಿಗೆ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ ಎಂದು ಈರಣ್ಣ ಕಡಾಡಿ ಹರಿಹಾಯ್ದರು.
ರಾಜ್ಯದಲ್ಲಿ ತುಘಲಕ್ ಸರ್ಕಾರ ಆಡಳಿತದಲ್ಲಿದೆ. ವಿದ್ಯುತ್ ಮಂತ್ರಿ ಕೆ ಜೆ ಜಾರ್ಜ್ಗೆ ಸರಿಯಾಗಿ ಇಲಾಖೆ ನಡೆಸಲು ಬರುತ್ತಿಲ್ಲ. ತಕ್ಷಣವೇ ಅವರನ್ನು ಸಂಪುಟದಿಂದ ಕೈ ಬಿಡಬೇಕು. ರೈತರ ಬಗ್ಗೆ ಕಾಳಜಿ, ಅಧ್ಯಯನ ಮಾಡಿದವರಿಗೆ ವಿದ್ಯುತ್ ಖಾತೆ ನೀಡಬೇಕು. ಅಲ್ಲದೇ ರಾಜ್ಯದಲ್ಲಿ ರೈತರಿಗೆ ಅನ್ಯಾಯ ಆಗುತ್ತಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದಿದ್ದಾರೆ. ಅಲ್ಲದೇ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೂಡ ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ, ಬೆಳಗಾವಿ ಅಧಿವೇಶನದೊಳಗೆ ಈ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಸಂಸದೆ ಮಂಗಳಾ ಅಂಗಡಿ ಮತ್ತು ಮಾಜಿ ಶಾಸಕ ಅನಿಲ ಬೆನಕೆ ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲ ಇದ್ದರೂ ಸರ್ಕಾರ ಮಾತ್ರ ಇಲ್ಲಿಯವರೆಗೂ ಬರ ಅಧ್ಯಯನ ನಡೆಸಿಲ್ಲ. ಅಲ್ಲದೇ ರೈತರಿಗೆ ಉಚಿತವಾಗಿ ನೀಡುತ್ತಿದ್ದ ಪಂಪ್ಸೆಟ್ ಮತ್ತು ಪರಿಕರಗಳನ್ನು ರೈತರು ಹಣ ಕೊಟ್ಟು ಖರೀದಿಸಬೇಕು ಎಂದು ಆದೇಶ ಹೊರಡಿಸಿದ್ದು ಖಂಡನೀಯ. ಈಗಾಗಲೇ ರಾಜ್ಯದಲ್ಲಿ ಸರ್ಕಾರ ತನ್ನ ಗ್ಯಾರಂಟಿ ಯೋಜನೆಯನ್ನು ಹೊಂದಾಣಿಕೆ ಮಾಡಿಕೊಳ್ಳಲು ರಾಜ್ಯವನ್ನು ದಿವಾಳಿಗೆ ತಂದಿದೆ. ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂದು ಆರೋಪಿಸಿದರು.