ಬೆಳಗಾವಿ:ಇಲ್ಲಿನ ಬಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಯಾರದ್ದೋ ಶವವನ್ನು ಇನ್ಯಾರಿಗೂ ನೀಡುವ ಮೂಲಕ ಮತ್ತೊಂದು ಮಹಾ ಎಡವಟ್ಟು ಮಾಡಿದ್ದಾರೆ. ಅಸ್ತಮಾದಿಂದ ಬಳಲುತ್ತಿದ್ದ ಬೆಳಗಾವಿಯ ಕ್ಯಾಂಪ್ ಪ್ರದೇಶದ 57 ವರ್ಷದ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಸಿಗದೇ ಮಹಿಳೆ ಕೋವಿಡ್ ವಾರ್ಡ್ನಲ್ಲಿ ಮೃತಪಟ್ಟಿದ್ದರು.
ಬಿಮ್ಸ್ ಆಸ್ಪತ್ರೆಯ ಮಹಾ ಎಡವಟ್ಟು... ಯಾರದ್ದೋ ಶವ ಇನ್ಯಾರಿಗೋ ಹಸ್ತಾಂತರ..! ಜುಲೈ 18ರಂದು ಮೃತಪಟ್ಟಿದ್ದ ಮಹಿಳೆಯ ಶವವನ್ನು ಇಲ್ಲಿನ ಸಿಬ್ಬಂದಿ ಸಂಬಂಧಿಕರಿಗೆ ಹಸ್ತಾಂತರಿಸಿದ್ದರು. ಇಂದು ಮತ್ತೆ ಮೃತ ಮಹಿಳೆಯ ಸಂಬಂಧಿಗೆ ಫೋನ್ ಮಾಡಿರುವ ಸಿಬ್ಬಂದಿ ನಿಮ್ಮ ಸಂಬಂಧಿ ಮೃತದೇಹ ಶವಾಗಾರದಲ್ಲಿದ್ದು, ಯಾಕೆ ತೆಗೆದುಕೊಂಡು ಹೋಗಿಲ್ಲ? ಬಂದು ಶವ ತೆಗೆದುಕೊಂಡು ಹೋಗಿ ಎಂದಿದ್ದಾರೆ.
ಬಿಮ್ಸ್ ಸಿಬ್ಬಂದಿ ಫೋನ್ ಕರೆಯಿಂದ ಕುಟುಂಬಸ್ಥರಿಗೆ ಧಿಕ್ಕು ತೋಚದಂತಾಗಿದೆ. ಎರಡು ದಿನಗಳ ಹಿಂದೆ ನಾವು ಮಾಡಿರುವ ಅಂತ್ಯ ಸಂಸ್ಕಾರ ಯಾರ ಶವ ಎಂದು ಕುಟುಂಬಸ್ಥರು ಕಂಗಾಲಾಗಿದ್ದಾರೆ. ಈಗಾಗಲೇ ಶವ ಸಂಸ್ಕಾರ ಮಾಡಿದ್ದೇವೆ ಅಂತಾ ಹೇಳಿದರೂ ಕೂಡ, ನಿಮ್ಮ ಸಂಬಂಧಿ ಶವ ಇನ್ನೂ ಶವಾಗಾರದಲ್ಲಿದೆ. ತೆಗೆದುಕೊಂಡು ಹೋಗಿ ಎಂದು ಬಿಮ್ಸ್ ಸಿಬ್ಬಂದಿ ಕರೆ ಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಯಾರದೋ ಶವ ಇನ್ಯಾರಿಗೋ ನೀಡುತ್ತಿರುವ ಬಿಮ್ಸ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕುಟುಂಬಸ್ಥರು, ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾರೆ.