ಬೆಳಗಾವಿ:ಕೊರೊನಾ ತಡೆಗೆ ರಾಜ್ಯಾದ್ಯಂತ ಲಾಕ್‌ಡೌನ್ ಹಿನ್ನೆಲೆ ಸಾರ್ವಜನಿಕರು ಕಾಲ್ನಡಿಗೆಯಲ್ಲೇ ಬಂದು ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದರೂ ಬೆಳಗಾವಿಯಲ್ಲಿ ಕುಂಟುನೆಪ ಹೇಳಿ ಬೈಕ್, ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ. ಅಂಥವರ ಬೈಕ್‌ಗಳನ್ನು ಪೊಲೀಸರು ಜಪ್ತಿ ಮಾಡುತ್ತಿದ್ದಾರೆ.
ನಗರದ ಚೆನ್ನಮ್ಮ ವೃತ್ತ, ಮಹಾಂತೇಶ ನಗರ ಓವರ್‌ಬ್ರಿಡ್ಜ್, ಅಶೋಕ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಹಾಗೂ ವಾಹನ ಸವಾರರು ಅಗತ್ಯವಸ್ತುಗಳ ಹೆಸರಲ್ಲಿ ಅನಗತ್ಯ ಓಡಾಟ ನಡೆಸುತ್ತಿದ್ದು, ಅಂತವರಿಗೆ ಪೊಲೀಸರು ಚಳಿ ಬಿಡಿಸುತ್ತಿದ್ದಾರೆ.
ಈ ವೇಳೆ ತಿಂಗಳ ಸಂತೆಯನ್ನು ಕೈಯಲ್ಲಿ ಹಿಡಿದು ನಡೆದುಕೊಂಡು ಹೋಗೋದು ಹೇಗೆ ಅಂತಾ ಪೊಲೀಸರಿಗೇ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಯಾವುದಾದರೊಂದು ಐಡಿ ಕಾರ್ಡ್, ಔಷಧಿ ಅಂಗಡಿ ಚೀಟಿ, ಆಸ್ಪತ್ರೆ ದಾಖಲೆಗಳನ್ನ ತೋರಿಸಿ ಹೋಗುತ್ತಿದ್ದಾರೆ.
ಒತ್ತಾಯಪೂರ್ವಕ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ ಪೊಲೀಸರು:ನಗರದ ಗಣಪತಿ ಗಲ್ಲಿ, ಶನಿವಾರ ಪೇಟೆ, ತರಕಾರಿ ಮಾರುಕಟ್ಟೆ ಹಾಗೂ ಮೈನ್ ಮಾರ್ಕೆಟ್ನಲ್ಲಿ ವ್ಯಾಪಾರ ವಹಿವಾಟಿಗೆ ಮುಂದಾಗುತ್ತಿದ್ದವರ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ರೌಂಡ್ಸ್ ಹಾಕುವ ಮೂಲಕ ಬಂದ್ ಮಾಡಿಸಿದರು. ಆದರೆ, ಪೊಲೀಸರ ನಡೆಗೆ ಬೀದಿ ಬದಿ ವ್ಯಾಪಾರಸ್ಥರ ಆಕ್ರೋಶ ವ್ಯಕ್ತಪಡಿಸಿದ್ದು, 10 ಗಂಟೆಯವರೆಗೆ ಮಾರಾಟಕ್ಕೆ ಅವಕಾಶ ಇದೆ ಎಂದರು.
ಕುಡಚಿ ಗ್ರಾಮದಿಂದ ನಡೆದುಕೊಂಡು ಆಗಮಿಸಿ ಹೂವು ಮಾರಾಟಕ್ಕೆ ಬಂದಿದ್ದೇವೆ. ಹತ್ತು ಗಂಟೆಯವರೆಗೆ ಹೂವು ಮಾರಾಟಕ್ಕೆ ಅವಕಾಶ ಮಾಡಿಕೊಡಿ ಎಂದು ಅಳಲು ತೋಡಿಕೊಂಡಿದ್ದಲ್ಲದೇ ಸಾವಿರಾರು ರೂಪಾಯಿ ನೀಡಿ ನಿನ್ನೆ ಹೂವು ಖರೀದಿಸಿದ್ದೇವೆ. ಇಂದು ಹೂವು ಮಾರಾಟ ಮಾಡದಿದ್ರೆ ಬಾಡಿ ಹೋಗಿ ಹಾಳಾಗುತ್ತದೆ ಎಂದು ಮಾಧ್ಯಮಗಳ ಎದುರು ಕಣ್ಣೀರು ಸುರಿಸಿದರು.
ಅನಗತ್ಯವಾಗಿ ರಸ್ತೆಗಿಳಿದ ವಾಹನ ಸೀಜ್: ಕುಂದಾನಗರಿ ಬೆಳಗಾವಿಯಲ್ಲಿ ಫೀಲ್ಡ್‌ಗಿಳಿದ ಡಿಸಿಪಿ ವಿಕ್ರಂ ಆಮ್ಟೆ, ಅನಗತ್ಯವಾಗಿ ರಸ್ತೆಗಿಳಿದ 50ಕ್ಕೂ ಹೆಚ್ಚು ಬೈಕ್‌ಗಳನ್ನು ಸೀಜ್ ಮಾಡಿದರು. ನಗರದ ಚೆನ್ನಮ್ಮ ವೃತ್ತದಲ್ಲಿ ತೀವ್ರ ತಪಾಸಣೆ ನಡೆಸುತ್ತಿರುವ ಪೊಲೀಸರು ಕುಂಟುನೆಪ ಹೇಳಿಕೊಂಡು ಬೈಕ್‌ನಲ್ಲಿ ಓಡಾಡುತ್ತಿರುವವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಈ ವೇಳೆ ದಂಪತಿ ಬೈಕ್ ಬಿಡುವಂತೆ ಡಿಸಿಪಿಗೆ ಕೇಳಿಕೊಂಡರು. ಆಗ ಮನೆ ಹತ್ತಿರದಲ್ಲೇ ಇರುವ ಅಂಗಡಿಗಳಲ್ಲಿ ದಿನಸಿ ಖರೀದಿಸಿ ಎಂದು ಡಿಸಿಪಿ ವಿಕ್ರಂ ಆಮ್ಟೆ ಬುದ್ಧಿವಾದ ಹೇಳಿ ಕಳಿಸಿದರು.
ಅಮಾವಾಸ್ಯೆ ಇದೆ ಹೂವಿನ ಮಾಲೆ ಖರೀದಿಸಬೇಕು ಎಂದವನ ಬೈಕ್ ಸೀಜ್: ನಾಳೆ ಅಮಾವಾಸ್ಯೆ ಇದೆ ಹೂವಿನ ಮಾಲೆ ತಗೊಂಡು ಬರಲು ಮನೆಯಲ್ಲಿ ಹೇಳಿದ್ರು. ಹೀಗಾಗಿ ತಂದೆಯನ್ನು ವ್ಯಾಕ್ಸಿನೇಷನ್ ಮಾಡಿಸಲು ಜಿಲ್ಲಾಸ್ಪತ್ರೆಗೆ ಬಿಟ್ಟು ಹೂವಿನ ಮಾಲೆ ತರಲು ಬಂದಿದ್ದೆ ಸರ್ ಬೇಡ ಅಂತಾ ಮನೆಯಲ್ಲಿ ಹೇಳಿದ್ರೆ ಕೇಳಬೇಕಲ್ಲ. ಮಾಲೆ ತರಲು ಕಳಿಸಿದ್ರು ಸರ್'. ಅದಕ್ಕೆ ಬಂದಿದ್ದೇನಿ ಎಂದು ಬೈಕ್ ಸವಾರ ಮನವಿ ಮಾಡಿಕೊಂಡಿದ್ದಾನೆ. ಆದರೆ ಸ್ಟೇಷನ್‌ಗೆ ಬಂದು ಬೈಕ್ ತಗೆದುಕೊಂಡು ಹೋಗುವಂತೆ ಪೊಲೀಸರು ಸೂಚನೆ ನೀಡಿದರು.