ಬೆಳಗಾವಿ: ಘಟಪ್ರಭಾ ನದಿಯಲ್ಲಿ ಇಬ್ಬರು ಸಂಬಂಧಿಕರು ಕೊಚ್ಚಿ ಹೋಗಿರುವ ಘಟನೆ ಮೂಡಲಗಿ ತಾಲೂಕಿನ ಅವರಾದಿ ಬಳಿ ಇಂದು ಮಧ್ಯಾಹ್ನ ನಡೆದಿದೆ. ಅವರಾದಿ ಬ್ರಿಡ್ಜ್ ಮೇಲೆ ನಿಯಂತ್ರಣ ತಪ್ಪಿ ಘಟಪ್ರಭಾ ನದಿಗೆ ಬೈಕ್ ಬಿದ್ದಿದ್ದು, ಅವರಾದಿ ಗ್ರಾಮದ ಚನ್ನಪ್ಪ ಹರಿಜನ(30), ದುರ್ಗವ್ವ ಹರಿಜನ(25) ಕೊಚ್ಚಿಹೋದ ಸಂಬಂಧಿಗಳು ಎಂದು ಗುರುತಿಸಲಾಗಿದೆ.
ಅವರಾದಿ ಗ್ರಾಮದಿಂದ ಮಹಾಲಿಂಗಪುರ ಪಟ್ಟಣಕ್ಕೆ ಇಬ್ಬರು ಹೊರಟಿದ್ದರು. ಈ ವೇಳೆ, ನಿಯಂತ್ರಣ ತಪ್ಪಿ ಬೈಕ್, ಸೇತುವೆ ಮೇಲಿಂದ ನೀರಿನಲ್ಲಿ ಬಿದ್ದಿದೆ. ಬ್ರಿಡ್ಜ್ ಬಳಿ ಬೈಕ್ ಪತ್ತೆಯಾಗಿದ್ದು, ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಮಳೆಯ ಅಬ್ಬರ ಜೋರಾಗಿರುವ ಹಿನ್ನೆಲೆ ಘಟಪ್ರಭಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಹರಿವಾಗಿದ್ದು, ಸ್ಥಳಕ್ಕೆ ಎಸ್ಡಿಆರ್ಎಫ್ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿ ನದಿಯಲ್ಲಿ ಕೊಚ್ಚಿ ಹೋಗಿರುವ ಇಬ್ಬರಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ. ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಗಳಿಗೆ ನೇಣು ಬಿಗಿದು ತಾನೂ ಅದೇ ಹಗ್ಗಕ್ಕೆ ಸಾವಿಗೆ ಶರಣಾದ ತಾಯಿ:ಸಹೋದರ ಮತ್ತು ನಾದಿನಿಯ ಕಿರುಕುಳಕ್ಕೆ ಬೇಸತ್ತು ಮೊದಲು ತನ್ನ ಮಗಳಿಗೆ ನೇಣು ಹಾಕಿ ಕೊಂದು, ಬಳಿಕ ಅದೇ ಹಗ್ಗದಲ್ಲಿ ತಾಯಿಯೂ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಕಿತ್ತೂರು ತಾಲೂಕಿನ ದಿಂಡಲಕೊಪ್ಪದಲ್ಲಿ ನಡೆದಿದೆ. ಮಹಾದೇವಿ ಇಂಚಲ(34), ಚಾಂದನಿ ಇಂಚಲ(7) ಮೃತ ದುರ್ದೈವಿಗಳು. ಮಹಾದೇವಿ ಇಂಚಲ ಅವರನ್ನು ಗೋಕಾಕ್ ತಾಲೂಕಿನ ಖನಗಾಂವ ಗ್ರಾಮದ ಯೋಧರೊಬ್ಬರಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ಏಳು ವರ್ಷಗಳ ಹಿಂದೆ ಪತಿ ಅಕಾಲಿಕವಾಗಿ ನಿಧನರಾಗಿದ್ದರು. ಬಳಿಕ ಮಹಾದೇವಿ ಇಂಚಲ ತನ್ನ ಪುತ್ರಿಯೊಂದಿಗೆ ದಿಂಡಲಕೊಪ್ಪ ಗ್ರಾಮದ ತನ್ನ ತವರು ಮನೆಯಲ್ಲೇ ವಾಸವಾಗಿದ್ದರು.
ಮದುವೆಯಾದ ಹೊಸತರಲ್ಲಿ ಸಹೋದರ ಮತ್ತು ನಾದಿನಿಯ ಜೊತೆಗೆ ಹೊಂದಾಣಿಕೆಯಿಂದಲೇ ಜೀವನ ನಡೆಯುತ್ತಿತ್ತು. ದಿನಗಳು ಕಳೆದಂತೆ ಮಹಾದೇವಿ ಇಂಚಲ ಅವರಿಗೆ ಸಹೋದರ ಮತ್ತು ನಾದಿನಿ ಕಿರುಕುಳ ಕೊಡಲು ಶುರು ಮಾಡಿದ್ದಾರೆ. ನಿತ್ಯವೂ ಕಿರುಕುಳ ನೀಡುತ್ತಿದ್ದರಿಂದ ಮನನೊಂದು ಆತ್ಮಹತ್ಯೆಗೆ ಮಹಾದೇವಿ ನಿರ್ಧರಿಸಿ, ಮೊದಲು ಮಗಳು ಚಾಂದನಿಗೆ ನೇಣು ಹಾಕಿ ಸಾಯಿಸಿದ್ದಾರೆ. ಬಳಿಕ ಅದೇ ಹಗ್ಗದಲ್ಲಿ ತಾನೂ ಸಾವಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ಕಿತ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ರೌಡಿಶೀಟರ್ ಮಾಸ್ತಿಗೌಡ ಕೊಲೆ ಪ್ರಕರಣ: ಠಾಣೆಗೆ ಬಂದು ಶರಣಾದ ಮೂವರು ಆರೋಪಿಗಳು