ಬೆಳಗಾವಿ:ಭಾರತ ಹುಣ್ಣಿಮೆ ಅಂಗವಾಗಿ ಯಲ್ಲಮ್ಮನಗುಡ್ಡದ ರೇಣುಕಾದೇವಿ ಜಾತ್ರೆ ನಡೆಯಲಿದ್ದು, ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರ ದಂಡು ಹರಿದುಬರಲಿದೆ.
ಚಕ್ಕಡಿಗಳಲ್ಲಿ ಭಕ್ತರು:ಇದು ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ದೊಡ್ಡ ಜಾತ್ರೆ. ಈ ಜಾತ್ರೆಗೆ ಲಕ್ಷಾಂತರ ಭಕ್ತರು ವಾಹನಗಳ ಜತೆಗೆ ಚಕ್ಕಡಿಗಳಲ್ಲೂ ಬರುತ್ತಾರೆ. ಈಗಾಗಲೇ ಸವದತ್ತಿಗೆ ಬಂದಿರುವ ಭಕ್ತರು ಜೋಗುಳಬಾವಿ ಬಳಿ, ಮಲಪ್ರಭಾ ನದಿ ದಂಡೆ ಹಾಗೂ ಯಲ್ಲಮ್ಮನಗುಡ್ಡದಲ್ಲಿರುವ ವಿಶಾಲವಾದ ಜಾಗದಲ್ಲಿ ಬಿಡಾರ ಹೂಡಿದ್ದಾರೆ. 'ಉಧೋ ಉಧೋ ಯಲ್ಲಮ್ಮ ನಿನ್ಹಾಲ್ಕ ಉಧೋ' ಎಂಬ ಜೈಕಾರ ಮುಗಿಲು ಮುಟ್ಟಿದೆ.
ಸಿಂಗಾರಗೊಂಡ ಅಂಗಡಿಗಳು: ಅಂಗಡಿ–ಮುಂಗಟ್ಟುಗಳು ಸಿಂಗಾರಗೊಂಡಿವೆ. ಕುಂಕುಮ ಭಂಡಾರ, ಕಾಯಿ, ಕರ್ಪೂರ, ಬಾಳೆಹಣ್ಣು, ಸೀರೆ–ಕುಪ್ಪಸ, ಮಿಠಾಯಿ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆಯುವ ನಿರೀಕ್ಷೆ ಇದೆ. ಭಾರತ ಹುಣ್ಣಿಮೆಗೆ ಬರುವ ಪ್ರತಿಯೊಬ್ಬ ಮಹಿಳೆ ಹಸಿರು ಬಳೆ ಧರಿಸುವುದು ಹಿಂದಿನಿಂದಲೂ ಬಂದ ಸಂಪ್ರದಾಯ. ಹಾಗಾಗಿ ನಾನಾ ವಿನ್ಯಾಸಗಳ ಬಳೆಗಳ ಅಂಗಡಿಗಳು ತೆರೆದಿವೆ.