ಬೆಳಗಾವಿ:ಕಳೆದ ಒಂದು ತಿಂಗಳಿನಿಂದ ಬೆಳಗಾವಿ ಕೇಂದ್ರಿತವಾಗಿ ರಾಜ್ಯಾದ್ಯಂತ ನಡೆಯುತ್ತಿರುವ ಭಗವದ್ಗೀತೆ ಅಭಿಯಾನದ ಮಹಾಸಮರ್ಪಣೆ ಶನಿವಾರ ಬೆಳಗಾವಿಯಲ್ಲಿ ನಡೆಯಲಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾಹಿತಿ ನೀಡಿದರು.
ಈ ಕುರಿತು ಬೆಳಗಾವಿಯಲ್ಲಿ ಶ್ರೀಗಳು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಬೆಳಗಾವಿಯ ಕಾಲೇಜು ರಸ್ತೆಯ ಲಿಂಗರಾಜ ಕಾಲೇಜು ಮೈದಾನದಲ್ಲಿ ಅಂದು ಸಂಜೆ 4 ಗಂಟೆಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಸಾನ್ನಿಧ್ಯ ವಹಿಸುವರು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಗಣ್ಯರು ಸಹ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ 50 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಹಾಗಾಗಿ ಸಾರ್ವಜನಿಕರು ತಪ್ಪದೇ ಭಾಗವಹಿಸಬೇಕು ಎಂದು ಸ್ವಾಮೀಜಿ ಕೋರಿದರು. ಇನ್ನು ಕಳೆದ ನವೆಂಬರ್ 21ರಂದು ಬೆಳಗಾವಿ ಕೇಂದ್ರಿತವಾಗಿ ರಾಜ್ಯಾದ್ಯಂತ ಭಗವದ್ಗೀತೆ ಅಭಿಯಾನ ಉದ್ಘಾಟನೆಯಾಗಿದ್ದು, ಅತ್ಯಂತ ಉತ್ತಮವಾಗಿ ನಡೆಯುತ್ತಿದೆ. ಬೆಳಗಾವಿ ಜಿಲ್ಲಾದ್ಯಂತ 159 ಶ್ಲೋಕ ಕೇಂದ್ರಗಳು ನಡೆಯುತ್ತಿದ್ದು, ನೂರಾರು ಶಾಲೆಗಳ 28 ಸಾವಿರಕ್ಕೂ ಹೆಚ್ಚು ಮಕ್ಕಳು ಭಗವದ್ಗೀತೆ ಕಲಿತಿದ್ದಾರೆ.