ಕರ್ನಾಟಕ

karnataka

ETV Bharat / state

ಮೊದಲ ಬಾರಿಗೆ ಬೆಳಗಾವಿ ಪಾಲಿಕೆ ಗದ್ದುಗೆ ಏರಿದ ಬಿಜೆಪಿ: ಬಿಜೆಪಿ ಪಾಲಾದ ಮೇಯರ್, ಉಪಮೇಯರ್ ಹುದ್ದೆ.. - ಬಿಜೆಪಿ ಉಸ್ತುವಾರಿ ನಿರ್ಮಲ ಕುಮಾರ್ ಸುರಾನಾ

ಬೆಳಗಾವಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಗೆ ಮಹಾನಗರ ಪಾಲಿಕೆ ಗದ್ದುಗೆ - ಬಿಜೆಪಿ ಕಾರ್ಪೊರೇಟರ್‌ಗಳಾದ ಶೋಭಾ ಸೋಮನಾಚೆ ಮೇಯರ್, ರೇಷ್ಮಾ ಪಾಟೀಲ್ ಉಪ ಮೇಯರ್ ಆಗಿ ಆಯ್ಕೆ.

For the first time BJP has ascended to the seat of Belgaum Corporation
ಮೊದಲ ಬಾರಿಗೆ ಬೆಳಗಾವಿ ಪಾಲಿಕೆ ಗದ್ದುಗೆ ಏರಿದ ಬಿಜೆಪಿ

By

Published : Feb 6, 2023, 8:12 PM IST

ಬೆಳಗಾವಿ: ಬೆಳಗಾವಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಾನಗರ ಪಾಲಿಕೆ ಗದ್ದುಗೆ ಭಾರತೀಯ ಜನತಾ ಪಕ್ಷಕ್ಕೆ ಒಲಿದಿದೆ. ಬಿಜೆಪಿ ಕಾರ್ಪೊರೇಟರ್‌ಗಳಾದ ಶೋಭಾ ಸೋಮನಾಚೆ ಮೇಯರ್, ಉಪ ಮೇಯರ್ ಆಗಿ ರೇಷ್ಮಾ ಪಾಟೀಲ್ ಆಯ್ಕೆ ಆಗಿದ್ದಾರೆ. ಮೇಯರ್ ಆಗಿ ಶೋಭಾ ಸೋಮನಾಚೆ ಅವಿರೋಧ ಆಯ್ಕೆ ಆಗಿದ್ದು, ಬಿಜೆಪಿ ಕಾರ್ಪೊರೇಟರ್‌ ರೇಷ್ಮಾ ಪಾಟೀಲ್‌ ಅವರು 42 ಮತ ಪಡೆದು ಉಪಮೇಯರ್ ಆಗಿ ಆಯ್ಕೆ ಆಗಿದ್ದಾರೆ ಎಂದು ಪ್ರಾದೇಶಿಕ ಆಯುಕ್ತ, ಚುನಾವಣಾಧಿಕಾರಿ ಎಂ.ಜಿ.ಹಿರೇಮಠ ಘೋಷಣೆ ಮಾಡಿದ್ದಾರೆ. ಉಪಮೇಯರ್ ಸ್ಥಾನಕ್ಕೆ ಸ್ಪರ್ಧೆ ಮಾಡಿದ ಎಂಇಎಸ್‌ಗೆ ಮುಖಭಂಗ ಆಗಿದೆ. ಎಂಇಎಸ್ ಅಭ್ಯರ್ಥಿ ವೈಶಾಲಿ ಭಾತಕಾಂಡೆ ಅವರು ಕೇವಲ ನಾಲ್ಕು ಮತ ಪಡೆದು ಹೀನಾಯ ಸೋಲು ಕಂಡಿದ್ದಾರೆ.

ಶಾಸಕ ಅಭಯ್ ಪಾಟೀಲ್ ಆಕ್ರೋಶ:ಚುನಾವಣಾ ಪ್ರಕ್ರಿಯೆಗೆ ಬಹಿಷ್ಕಾರ ಮಾಡಿ ಹೊರನಡೆದ ಕಾಂಗ್ರೆಸ್ ಸದಸ್ಯರ ವಿರುದ್ಧ ಶಾಸಕ ಅಭಯ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್​ ಸದಸ್ಯರಿಗೆ ಪಾಲಿಕೆಯ ನೂತನ ಮೇಯರ್ ಹಾಗೂ ಉಪಮೇಯರ್‌ಗೆ ಅಭಿನಂದನೆ ಸಲ್ಲಿಸುವಷ್ಟು ಸೌಜನ್ಯವಿಲ್ಲ. ಬೆಳಗಾವಿಯ ಅಭಿವೃದ್ಧಿಗೂ ವಿರೋಧ ಇದೆ ಅಂತಾ ಮೊದಲ ದಿನವೇ ತೋರಿಸಿದ್ದಾರೆ. ಇದೇ ಮೊದಲ ಬಾರಿಗೆ ಮೇಯರ್ ಚುನಾವಣೆಗೆ ಎಲ್ಲರೂ ತಮ್ಮ ಮನೆಯಿಂದ ಬಂದಿದ್ದಾರೆ.

ಈ ಹಿಂದೆಲ್ಲ ರೆಸಾರ್ಟ್‌ಗಳಿಂದ ಮೇಯರ್ ಚುನಾವಣೆಗೆ ಬರುತ್ತಿದ್ದರು. ರೆಸಾರ್ಟ್ ರಾಜಕಾರಣ ಬೇಡ ಎಂದು ಒಂದೇ ಪಕ್ಷಕ್ಕೆ ಅಧಿಕಾರ ಕೊಟ್ಟಿರುವ ಜನರಿಗೆ ಧನ್ಯವಾದಗಳು. ಬೆಳಗಾವಿ ನಗರದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು. ಇಲ್ಲಿ ಇದ್ದವರಿಗೂ, ಹೊರ ಹೋದವರಿಗೂ ಅಭಿನಂದನೆ ಸಲ್ಲಿಸುವೆ ಎಂದು ಮೇಯರ್, ಉಪಮೇಯರ್ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಶಾಸಕ ಅಭಯ್ ಪಾಟೀಲ್ ಹೇಳಿದರು.

ನಿರ್ಮಲ ಕುಮಾರ್ ಸುರಾನಾ ಅಭಿನಂದನೆ:ಬೆಳಗಾವಿ ಮೇಯರ್ ಶೋಭಾ ಸೋಮನಾಚೆ, ಉಪ ಮೇಯರ್ ರೇಷ್ಮಾ ಪಾಟೀಲ್‌ಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ, ಬೆಳಗಾವಿ ವಿಭಾಗ ಬಿಜೆಪಿ ಉಸ್ತುವಾರಿ ನಿರ್ಮಲ ಕುಮಾರ್ ಸುರಾನಾ ಅಭಿನಂದನೆ ಸಲ್ಲಿಸಿದ್ದಾರೆ. ಬೆಳಗಾವಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಬೆಳಗಾವಿ ಮೇಯರ್, ಉಪಮೇಯರ್ ಬಿಜೆಪಿಯಿಂದ ಗೆದ್ದಿದ್ದಾರೆ. ಮೇಯರ್​ ಆಗಿ ಶೋಭಾ ಸೋಮನಾಚೆ ಅವಿರೋಧವಾಗಿ ಆಗಿ ಆಯ್ಕೆ ಆಗಿದ್ದಾರೆ, ಅವರಿಗೆ ಅಭಿನಂದನೆಗಳು.

ನಮ್ಮಲ್ಲಿ ಇದ್ದ 39 ಮತ ಹಾಗೂ ಪಕ್ಷೇತರ ಸದಸ್ಯರು ಸೇರಿ 42 ಮತ ಉಪಮೇಯರ್​ಗೆ ಬಂದಿವೆ. ಮುಂದಿನ ದಿನಗಳಲ್ಲಿ ಬೆಳಗಾವಿಯ ಅಭಿವೃದ್ಧಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚುನಾವಣೆ ಪ್ರಕ್ರಿಯೆ ಕುರಿತಂತೆ ಗಮನಿಸುತ್ತಿದ್ದರು. ಬಿಜೆಪಿ ರಾಜ್ಯಾಧ್ಯಕ್ಷರು ಸಹ ಪಕ್ಷವು ಗೆಲ್ಲಲೇಬೇಕೆಂಬ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಎಂದು ಬೆಳಗಾವಿಯಲ್ಲಿ ಬಿಜೆಪಿ ಉಸ್ತುವಾರಿ ನಿರ್ಮಲ ಕುಮಾರ್ ಸುರಾನಾ ಪ್ರತಿಕ್ರಿಯಿಸಿದರು.

ಬೆಳಗಾವಿಯ ಶಾಸಕರು, ಸಂಸದರು ಪಾಲಿಕೆ ಚುನಾವಣೆಯಲ್ಲಿ 35 ಸೀಟ್ ಗೆದ್ದಾಗ ನಮಗೆ ಖುಷಿ ಆಗಿದೆ. ಜನರು ನಮ್ಮ ಜೊತೆಯಲ್ಲಿ ಇದ್ದಾರೆ, ಮುಂದಿನ ದಿನಗಳಲ್ಲಿ ಜನರ ಆಪೇಕ್ಷೆಯಂತೆ ಕೆಲಸ ಮಾಡುತ್ತೇವೆ. ಪಾಲಿಕೆ ಸದಸ್ಯರ ಜೊತೆ ಬೆಳಗಾವಿಯ ಶಾಸಕರಾದ ಅಭಯ್ ಪಾಟೀಲ್ ಹಾಗೂ ಅನಿಲ್ ಬೆನಕೆ ಅವರು ಸದಾ ಇರಲಿದ್ದಾರೆ. ಬೆಳಗಾವಿ ನಗರದ ಅಭಿವೃದ್ಧಿಗೆ ಒಂದು ಹೊಸ ಹೆಜ್ಜೆ ಇರಲಿದ್ದೇವೆ ಎಂದ ನಿರ್ಮಲಕುಮಾರ್ ಸುರಾನಾ ಹೇಳಿದರು.

ಪಟಾಕಿ ಸಿಡಿಸಿ ಬಿಜೆಪಿ ಕಾರ್ಯಕರ್ತರ ಸಂಭ್ರಮ:ಬೆಳಗಾವಿಗೆ ನೂತನ ಮೇಯರ್ ಆಗಿ ಬಿಜೆಪಿಯ ಶೋಭಾ ಸೋಮನಾಚೆ, ಉಪಮೇಯರ್ ಆಗಿ ರೇಷ್ಮಾ ಪಾಟೀಲ್ ಆಯ್ಕೆ ಆಗುತ್ತಿದ್ದಂತೆ, ಮಹಾನಗರ ಪಾಲಿಕೆ ಎದುರು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಈ ವೇಳೆ ಪಟಾಕಿ ಸಿಡಿಸಿ ಸಂಭ್ರಮ ಹಂಚಿಕೊಂಡರು. ಅಲ್ಲದೆ, ಭಾರತ ಮಾತಾ ಕೀ ಜೈ ಎಂದು ಘೋಷಣೆ ಕೂಗಿ ಹರ್ಷೋದ್ಘಾರ ವ್ಯಕ್ತಪಡಿಸಿದರು.

ಇದನ್ನೂ ಓದಿ:ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ನಮ್ಮ ಕೊಡುಗೆ ಅಪಾರ: ಸಂಸದ ರಮೇಶ್​ ಜಿಗಜಿಣಗಿ

ABOUT THE AUTHOR

...view details