ಚಿಕ್ಕೋಡಿ : ಒಂದು ತಿಂಗಳ ಹಿಂದೆ ರೈತನೊಬ್ಬ ಸಾಲದ ಸುಳಿಗೆ ಸಿಲುಕಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ. ಮೃತನ ಕುಟುಂಬದ ಸ್ಥಿತಿ ಚಿಂತಾಜನಕವಾಗಿರುವುದನ್ನು ಕಂಡು ಆತನ ಕುಟುಂಬಕ್ಕೆ ಬೆಳಗಾವಿ ಎಸ್ ಪಿ ಲಕ್ಷ್ಮಣ ನಿಂಬರಗಿ 50 ಸಾವಿರ ರೂ. ಧನ ಸಹಾಯ ನೀಡಿ ಮಾನವೀಯತೆ ಮೆರದಿದ್ದಾರೆ.
ಆತ್ಮಹತ್ಯೆಗೆ ಶರಣಾದ ರೈತನ ಕುಟುಂಬಕ್ಕೆ 50 ಸಾವಿರ ರೂ. ನೀಡಿದ ಬೆಳಗಾವಿ ಎಸ್ಪಿ - Belagi farmer suicide news
ಸಾಲದ ಸುಳಿಗೆ ಸಿಲುಕಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಮೃತ ರೈತನ ಕುಟುಂಬಕ್ಕೆ ಬೆಳಗಾವಿ ಎಸ್ ಪಿ ಲಕ್ಷ್ಮಣ ನಿಂಬರಗಿ 50 ಸಾವಿರ ರೂ. ಧನ ಸಹಾಯ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಲ್ತಾನಪೂರ ಗ್ರಾಮದ ರೈತ ಲಕ್ಕಪ್ಪ ಸಂಗಪ್ಪ ದೊಡ್ಡಮನಿ ಅವರು ತಿಂಗಳ ಹಿಂದೆ ತಾವು ಕೊರೆಯಿಸಿದ ಕೊಳವೆ ಬಾವಿಯಲ್ಲಿ ನೀರು ಬಂದಿಲ್ಲ ಎಂದು ಸಾಲದ ಸುಳಿಗೆ ಸಿಲುಕಿ ಮನನೊಂದು ಅದೇ ಕೊಳವೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಘಟನೆ ನಡೆದ ಕೆಲ ಗಂಟೆಗಳಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ, ಮೃತ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದರು. ಮೃತ ರೈತನ ಕುಟುಂಬದ ಸ್ಥಿತಿ ಚಿಂತಾಜನಕವಾಗಿರುವುದನ್ನು ಕಂಡು 50 ಸಾವಿರ ರೂಪಾಯಿಯನ್ನು ಬೆಳಗಾವಿ ಎಸ್ ಪಿ ಲಕ್ಷ್ಮಣ ನಿಂಬರಗಿ ಅವರ ಪರವಾಗಿ ರಾಯಬಾಗ ವೃತ್ತ ನಿರೀಕ್ಷಕ (ಸಿ.ಪಿ.ಐ) ಕೆ.ಎಸ್.ಹಟ್ಟಿ ಮೃತ ರೈತನ ಪತ್ನಿ ಕಸ್ತೂರಿ ಲಕ್ಕಪ್ಪ ದೊಡ್ಡಮನಿ, ಪುತ್ರ ಸಂಗಮೇಶ ದೊಡ್ಡಮನಿ ಹಾಗೂ ಪುತ್ರಿ ಜಯಶ್ರೀ ದೊಡ್ಡಮನಿ ಅವರಿಗೆ ನಗದು ನೀಡಿದ್ದಾರೆ.