ಕರ್ನಾಟಕ

karnataka

ETV Bharat / state

ಯಾರಿಗೆ ಸಿಗುತ್ತೆ ಬೆಳಗಾವಿ ಟಿಕೆಟ್​: ಉತ್ತರದಲ್ಲಿ ಸಿದ್ದು ಪ್ರಭಾವ ಕುಗ್ಗಿಸಲು ಆರ್​ಎಸ್‍ಎಸ್ ಪ್ಲಾನ್​ ಏನು...?

ಬೆಳಗಾವಿ ಉಪಸಮರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಆರ್‍ಎಸ್‍ಎಸ್ ಗಂಭೀರ ಚಿಂತನೆಯಲ್ಲಿ ತೊಡಗಿದ್ದು, ಉತ್ತರ ಕರ್ನಾಟಕದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಭಾವ ಕುಗ್ಗಿಸಲು ಆರ್​ಎಸ್​ಎಸ್​​​ ನಾಯಕರು ಹಾಕಿಕೊಂಡಿರುವ ಪ್ಲಾನ್​​ ಕೂಡ ರೋಚಕವಾಗಿದೆ.

Belgavi
ರಮೇಶ ಕತ್ತಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ

By

Published : Nov 16, 2020, 4:22 PM IST

ಬೆಳಗಾವಿ: ಕೇಂದ್ರ ಸಚಿವರಾಗಿದ್ದ ಸುರೇಶ್​ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆ ಉಪಚುನಾವಣೆ ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ಆದರೆ, ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ಮಾತ್ರ ವಿಸ್ತರಿಸುತ್ತಲೇ ಇದೆ. ಮತ್ತೊಂದೆಡೆ ಬೆಳಗಾವಿ ಉಪ ಸಮರದ ಟಿಕೆಟ್ ಅಂಗಡಿ ಕುಟುಂಬಕ್ಕೋ? ರಾಜಕೀಯ ವಂಚಿತರಿಗೋ? ಅಥವಾ ಹೊಸಬರಿಗೋ ಎಂಬುವುದೂ ಜಿಜ್ಞಾಸೆಗೆ ಕಾರಣವಾಗಿದೆ.

ಬೆಳಗಾವಿ ಉಪಸಮರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಆರ್‍ಎಸ್‍ಎಸ್ ಗಂಭೀರ ಚಿಂತನೆ

ಟಿಕೆಟ್ ಹಂಚಿಕೆ ವಿಚಾರದಲ್ಲಿ ಆರ್‍ಎಸ್‍ಎಸ್ ಗಂಭೀರ ಚಿಂತನೆಯಲ್ಲಿ ತೊಡಗಿದ್ದು, ಉತ್ತರ ಕರ್ನಾಟಕದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಭಾವ ಕುಗ್ಗಿಸಲು ಆರ್​ಎಸ್​ಎಸ್​​​ ನಾಯಕರು ಹಾಕಿಕೊಂಡಿರುವ ಪ್ಲಾನ್​ ಕೂಡ ರೋಚಕವಾಗಿದೆ.

ಅಂಗಡಿ ಕುಟುಂಬಕ್ಕೆ ಆದ್ಯತೆ ನೀಡಲು ಪಟ್ಟು!

ರಾಜ್ಯ ರಾಜಕಾರಣದ ಅಜಾತಶತ್ರು ಎಂದೇ ಗುರುತಿಸಿಕೊಂಡಿದ್ದ ಸುರೇಶ್​ ಅಂಗಡಿ ಕಿಲ್ಲರ್ ಕೊರೊನಾಗೆ ಬಲಿಯಾಗಿದ್ದಾರೆ. ಬೆಳಗಾವಿ ಕ್ಷೇತ್ರದಿಂದ ನಾಲ್ಕು ಸಲ ಗೆದ್ದಿದ್ದ ಅವರು, ಪ್ರಸಕ್ತ ಮೋದಿ ಸರ್ಕಾರದಲ್ಲಿ ರೈಲ್ವೆ ರಾಜ್ಯ ಸಚಿವರಾಗಿದ್ದರು. ಸುರೇಶ್​ ಅಂಗಡಿ ಅವರ ಅಕಾಲಿಕ ನಿಧನದ ಕಾರಣಕ್ಕೆ ಅವರ ಕುಟುಂಬಕ್ಕೆ ಟಿಕೆಟ್ ನೀಡಬೇಕು ಎಂದು ಜಿಲ್ಲಾ ಕಮಲ ನಾಯಕರು, ಅಂಗಡಿ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಅಲ್ಲದೆ ಸುರೇಶ್​​ ಅಂಗಡಿ ಅವರ ಕಿರಿಯ ಪುತ್ರಿ ಶೃದ್ಧಾಗೆ ಟಿಕೆಟ್ ಕೊಡಿಸಲು ಆರ್‍ಎಸ್‍ಎಸ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮೂಲಕ ಮಾಜಿ ಸಿಎಂ ಜಗದೀಶ ಶೆಟ್ಟರ್ ಲಾಬಿ ನಡೆಸುತ್ತಿದ್ದಾರೆ. ಶೃದ್ಧಾ ಅವರು ಜಗದೀಶ್​ ಶೆಟ್ಟರ್ ಅವರ ಕಿರಿಯ ಸೊಸೆಯಾಗಿದ್ದು, ಅಂಗಡಿ ಕುಟುಂಬಕ್ಕೆ ಕ್ಷೇತ್ರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಂತ್ರ ಹೆಣೆಯಲಾಗುತ್ತಿದೆ. ಆದರೆ, ಕುಟುಂಬ ಸದಸ್ಯರಿಗೆ ಬಿಜೆಪಿ ನಾಯಕರು ಮಣೆ ಹಾಕುವುದು ವಿರಳ ಎನ್ನಲಾಗುತ್ತಿದೆ.

ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಹಾಗೂ ಮನೋಹರ್ ಪರಿಕ್ಕರ್ ವಿಚಾರದಲ್ಲಿ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಿರಲಿಲ್ಲ. ಅದು ಬೆಳಗಾವಿ ಕ್ಷೇತ್ರದಲ್ಲೂ ಪಕ್ಷ ಇದೇ ತೀರ್ಮಾನಕ್ಕೆ ಬರುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.

ಟಿಕೆಟ್ ನಮಗೆ ಕೊಡಿ, ವಂಚಿತರ ಬೇಡಿಕೆ!

ಸುರೇಶ್​ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡುವಂತೆ ಜಿಲ್ಲೆಯ ಕಮಲ ನಾಯಕರು ಪಕ್ಷವನ್ನು ಒತ್ತಾಯಿಸಿದ್ದಾರೆ. ಒಂದು ವೇಳೆ, ಆ ಕುಟುಂಬಕ್ಕೆ ಟಿಕೆಟ್ ನಿರಾಕರಿಸಿದರೆ ಬೆಳಗಾವಿ ಕ್ಷೇತ್ರದ ಟಿಕೆಟ್ ನಮಗೆ ಕೊಡಿ ಎಂದು ರಾಜಕೀಯ ವಂಚಿತ ಜಿಲ್ಲಾ ನಾಯಕರು ಪಟ್ಟು ಹಿಡಿದಿದ್ದಾರೆ. ಚಿಕ್ಕೋಡಿ ಕ್ಷೇತ್ರ ಹಾಗೂ ಕಳೆದ ರಾಜ್ಯಸಭೆ ಚುನಾವಣೆಯಲ್ಲಿ ಅವಕಾಶ ವಂಚಿತ ರಮೇಶ ಕತ್ತಿ ಈ ಬೇಡಿಕೆ ಇಟ್ಟಿದ್ದಾರೆ. ಮತ್ತೊಂದೆಡೆ ರಾಜ್ಯಸಭೆಗೆ ಮರು ಆಯ್ಕೆ ಆಗುವಲ್ಲಿ ವಿಫಲರಾದ ಡಾ.ಪ್ರಭಾಕರ ಕೋರೆ ಅವರೂ ಇದೇ ಬೇಡಿಕೆ ಇಟ್ಟಿದ್ದಾರೆ. ಮತ್ತೊಂದೆಡೆ ಪಕ್ಷಕ್ಕಾಗಿ ಕಾರ್ಯಕರ್ತರೂ ನಮಗೊಂದು ಅವಕಾಶ ನೀಡಿ ಎಂದು ಕೋರುತ್ತಿದ್ದಾರೆ. ಆದರೆ, ಪಕ್ಷ ವಂಚಿತರಿಗೆ ಮಣೆ ಹಾಕುತ್ತಾರೋ? ಅಥವಾ ಹೊಸಬರಿಗೆ ಅವಕಾಶ ನೀಡುವರೋ ಕಾದು ನೋಡಬೇಕಿದೆ.

ಸಿದ್ದು ಕೌಂಟರ್ ಕೊಡಿಸಲು ಆರ್​ಎಸ್‍ಎಸ್ ಪ್ಲಾನ್!

ಬೆಳಗಾವಿ ಉಪ ಸಮರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಆರ್‍ಎಸ್‍ಎಸ್ ಮುಖಂಡರು ಗಂಭೀರವಾಗಿ ಚಿಂತನೆಯಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿರುವ 28 ಲೋಕಸಭೆ ಅಭ್ಯರ್ಥಿಗಳ ಪೈಕಿ ಒಬ್ಬರೂ ಕುರುಬ ಸಮಾಜದ ಸಂಸದರು ಇಲ್ಲ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಉತ್ತಮ ಹಿಡಿತ ಹೊಂದಿದೆ. ಈ ಕಾರಣಕ್ಕೆ ಕುರುಬ ಸಮಾಜಕ್ಕೆ ಟಿಕೆಟ್ ಕೊಟ್ಟು ಮಾಜಿ ಸಿಎಂ ಸಿದ್ದರಾಮಯ್ಯಗೆ ಕೌಂಟರ್ ಕೊಡಲು ಆರ್‍ಎಸ್‍ಎಸ್ ನಾಯಕರು ಪ್ಲಾನ್ ಹಾಕಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಸಚಿವ ರಮೇಶ್​ ಜಾರಕಿಹೊಳಿ ಆಪ್ತರೂ ಆಗಿರುವ ಮಾಜಿ ಸಂಸದ ಅಮರಸಿಂಹ ಪಾಟೀಲ ಅವರನ್ನೇ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡುವ ಬಗ್ಗೆಯೂ ಹಾಲುಮತ ಸಮಾಜ ಆಗ್ರಹಿಸುತ್ತಿದೆ. ಆರ್‍ಎಸ್‍ಎಸ್ ನಾಯಕರ ಚಿಂತನೆ ಹಾಗೂ ರಮೇಶ ಜಾರಕಿಹೊಳಿ ಪ್ರಭಾವದಿಂದ ಅಮರಸಿಂಹ ಪಾಟೀಲ ಅವರಿಗೆ ಟಿಕೆಟ್ ನೀಡಿದರೂ ಅಚ್ಚರಿಯಿಲ್ಲ. ಆದರೆ ಲಿಂಗಾಯತ ಹಾಗೂ ಮರಾಠಿ ಭಾಷಿಕರೇ ಈ ಕ್ಷೇತ್ರದಲ್ಲಿ ನಿಣಾರ್ಯಕರಾಗಿದ್ದು, ಆರ್‍ಎಸ್‍ಎಸ್ ನಾಯಕರು ಎಲ್ಲ ಆಯಾಮಗಳಲ್ಲಿ ಚರ್ಚೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ABOUT THE AUTHOR

...view details