ಬೆಳಗಾವಿ: ದಿ. ಸುರೇಶ ಅಂಗಡಿ ಅಕಾಲಿಕ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭಾ ಉಪಚುನಾವಣೆ ಮತ ಎಣಿಕೆ ಆರಂಭವಾಗಿದೆ. ಜಿಲ್ಲಾ ಚುನಾವಣಾ ಅಧಿಕಾರಿ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ ಓಪನ್ ಮಾಡಲಾಯಿತು.
ನಗರದ ಆರ್‌ಪಿಡಿ ಮಹಾವಿದ್ಯಾಲಯದಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಈಗಾಗಲೇ ಜಿಲ್ಲಾ ಚುನಾವಣಾಧಿಕಾರಿ ಡಿಸಿ ಡಾ. ಕೆ.ಹರೀಶ್ ಕುಮಾರ್ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ ಓಪನ್ ಮಾಡಲಾಯಿತು. ಏಳು ಗಂಟೆಗೆ ಓಪನ್ ಆಗಬೇಕಿದ್ದ ಸ್ಟ್ರಾಂಗ್ ರೂಮ್ 20 ನಿಮಿಷಗಳ ಕಾಲ ತಡವಾಗಿ ತೆರೆಯಲಾಗಿದೆ. ಈ ವೇಳೆ ಡಿಸಿ ಸ್ಟ್ರಾಂಗ್ ರೂಮ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಬೆಳಗಾವಿ ಲೋಕಸಭಾ ಉಪಚುನಾವಣೆಯ ಮತ ಎಣಿಕೆ ಆರಂಭ ದಿ. ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 17ರಂದು ನಡೆದ ಮತದಾನದಲ್ಲಿ ಶೇಕಡಾ 56.02ರಷ್ಟು ಮತದಾನವಾಗಿತ್ತು. ಬಿಜೆಪಿ ಅಭ್ಯರ್ಥಿ ಮಂಗಳ ಅಂಗಡಿ, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಸೇರಿ ಒಟ್ಟು 10 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇಂದು ಅವರ ಭವಿಷ್ಯ ನಿರ್ಧಾರವಾಗಲಿದೆ.
ನೆಗೆಟಿವ್ ವರದಿ ಕಡ್ಡಾಯ:
ಮತ ಎಣಿಕೆ ಕೇಂದ್ರ ಪ್ರವೇಶಕ್ಕೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿದೆ. ಪ್ರತಿಯೊಬ್ಬರ ಕೋವಿಡ್ ನೆಗೆಟಿವ್ ವರದಿ ಪರಿಶೀಲಿಸಿ ಪೊಲೀಸರು ಒಳ ಬಿಡುತ್ತಿದ್ದು, ಮತ ಎಣಿಕೆ ಕೇಂದ್ರದ ಎದುರು ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ.
ಸಂಜೆ ವೇಳೆಗೆ ಫಲಿತಾಂಶ ಬರುವ ಸಾಧ್ಯತೆ:
ಚುನಾವಣಾ ಆಯೋಗ ನಿರ್ದೇಶನದನ್ವಯ ಕೋವಿಡ್ ಮಾರ್ಗಸೂಚಿಯಂತೆ ಮತ ಎಣಿಕೆ ಆರಂಭ ಹಿನ್ನೆಲೆ, ಸಂಜೆ ವೇಳೆ ಅಧಿಕೃತ ಫಲಿತಾಂಶ ಬರುವ ಸಾಧ್ಯತೆಯಿದೆ. ಮತ ಎಣಿಕೆಗಾಗಿ 17 ಕೊಠಡಿಗಳಲ್ಲಿ 34 ಟೇಬಲ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಲಾ ಒಂದು ಕೊಠಡಿಯಲ್ಲಿ ಎರಡು ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಕೊಠಡಿಯಲ್ಲಿ ಮತ ಎಣಿಕೆ ಸಿಬ್ಬಂದಿ ಸೇರಿ 15 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.
ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡಲು 10 ಕೌಂಟರ್‌ಗಳ ಸ್ಥಾಪನೆ:
ಕೋವಿಡ್ ನೆಗೆಟಿವ್ ವರದಿ ಇದ್ದೂ ಕೂಡ ಕೊರೊನಾ ರೋಗದ ಗುಣಲಕ್ಷಣಗಳು ಕಂಡು ಬಂದ್ರೆ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡಿಸಲು 10 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಕೌಟರ್‌ಗಳನ್ನು ಸ್ಥಾಪಿಸಲಾಗಿದೆ. ಮತ ಎಣಿಕೆ ಸಿಬ್ಬಂದಿಗೆ ಕೋವಿಡ್ ಮಾರ್ಗಸೂಚಿ ಪ್ರಕಾರ ಸ್ಯಾನಿಟೈಸರ್, ಮಾಸ್ಕ್, ಫೇಸ್ ಶೀಲ್ಡ್ ವಿತರಣೆ ಮಾಡಲಾಗುತ್ತಿದೆ. ಮತ ಎಣಿಕೆ ಕೇಂದ್ರದ ಸುತ್ತಲೂ 450ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಮತ ಎಣಿಕೆ ನಡೆಯುವ ಆರ್‌ಪಿಡಿ ಕಾಲೇಜಿನ 200 ಮೀಟರ್ ವ್ಯಾಪ್ತಿಯಲ್ಲಿ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿ ಮಾಡಿಕೊಳ್ಳಲಾಗಿದೆ. ಜನತಾ ಕರ್ಫ್ಯೂ ಹಿನ್ನೆಲೆ ವಿಜಯೋತ್ಸವ, ಸಂಭ್ರಮಾಚರಣೆ ನಿಷೇಧಿಸಿ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ.
ಸ್ಟ್ರಾಂಗ್ ರೂಮ್ ಓಪನ್ ಮಾಡುವ ವಿಚಾರಕ್ಕೆ ಗೊಂದಲ:
ಮೊದಲು ಓಪನ್ ಮಾಡುವ ಸ್ಟ್ರಾಂಗ್ ರೂಮ್ ಯಾವುದು ಎಂಬ ವಿಚಾರಕ್ಕೆ ಗೊಂದಲ ಉಂಟಾಗಿತ್ತು. ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿಗೆ ಪ್ರತ್ಯೇಕ ಸ್ಟ್ರಾಂಗ್ ರೂಮ್ ಮಾಡಲಾಗಿತ್ತು. ಹೀಗಾಗಿ ಯಾವ ಸ್ಟ್ರಾಂಗ್ ರೂಮ್ ಓಪನ್ ಮಾಡಬೇಕು ಎಂಬ ಗೊಂದಲದಲ್ಲಿ ಸಿಬ್ಬಂದಿ ಸಿಲುಕಿದ್ದರು. ಸ್ಟ್ರಾಂಗ್ ರೂಮ್ ಓಪನ್ ಮಾಡುವ ವಿಚಾರಕ್ಕೆ ಚುನಾವಣಾ ಸಿಬ್ಬಂದಿಯನ್ನು ಡಿಸಿ ಹರೀಶ್ ಕುಮಾರ್ ತರಾಟೆ ತೆಗೆದುಕೊಂಡರು. ಸ್ಟ್ರಾಂಗ್ ರೂಮ್ಗೆ ಡಿಸಿ ಆಗಮಿಸಿದರೂ ಸ್ಟ್ರಾಂಗ್ ರೂಮ್ ಓಪನ್ ಮಾಡುವ ಸಿಬ್ಬಂದಿಯೇ ಬಂದಿರಲಿಲ್ಲ. ಹೀಗಾಗಿ 20 ನಿಮಿಷಗಳ ಕಾಲ ಕಾಯುತ್ತಾ ನಿಂತ ಘಟನೆಯೂ ನಡೆಯಿತು.
ಇದನ್ನೂ ಓದಿ:ಜೀವಭಯದಿಂದ ವ್ಯಾಕ್ಸಿನ್ ಮೊರೆಹೋದ ಕಾಫಿನಾಡಿನ ಜನತೆ