ಬೆಳಗಾವಿ: ನೂತನ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಇಂದು ಸಂಜೆ ಅಧಿಕಾರ ಸ್ವೀಕರಿಸಿದರು. ಸೇವಾ ನಿವೃತ್ತಿ ಹೊಂದಿದ ನಿಕಟಪೂರ್ವ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಅಧಿಕಾರವನ್ನು ಹಸ್ತಾಂತರಿಸಿದರು.
ನೂತನ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅಧಿಕಾರ ಸ್ವೀಕಾರ ಬೆಳಗಾವಿ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಎಂ.ಜಿ.ಹಿರೇಮಠ ಮಾತನಾಡಿ, ಬೆಳಗಾವಿ ದೊಡ್ಡ ಮತ್ತು ಸೂಕ್ಷ್ಮ ಜಿಲ್ಲೆಯಾಗಿದೆ. ಆದರೆ ನಾನು ಮೂಲತಃ ಬೆಳಗಾವಿ ಜಿಲ್ಲೆಯವನಾಗಿರುವುದರಿಂದ ಕೆಲಸ ಸುಲಭವಾಗಲಿದೆ. ಗದಗ ಜಿಲ್ಲೆಯಲ್ಲಿ ಪ್ರವಾಹ ನಿರ್ವಹಿಸಿದ ಅನುಭವವಿದೆ. ಕೊರೊನಾ, ನೆರೆ, ಬರ ಸೇರಿದಂತೆ ಎಲ್ಲ ಪರಿಸ್ಥಿತಿಯನ್ನು ನಿಭಾಯಿಸಿದ ಅನುಭವವಿದೆ. ಅದು ಇಲ್ಲಿ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ನಿವೃತ್ತರಾದ ನಿಕಟಪೂರ್ವ ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ, ನೂತನ ಜಿಲ್ಲಾಧಿಕಾರಿಗಳಿಗೆ ಹೂಗುಚ್ಛ ನೀಡಿ ಶುಭ ಕೋರಿದರು. ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಡಾ.ಬೊಮ್ಮನಹಳ್ಳಿ ಕೃತಜ್ಞತೆ ಸಲ್ಲಿಸಿದರು.
ಬೆಳಗಾವಿ ನೂತನ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನೂತನ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಪರಿಚಯ:ಬೆಳಗಾವಿ ನೂತನ ಜಿಲ್ಲಾಧಿಕಾರಿ ಮಹಾಂತೇಶ ಜಿ. ಹಿರೇಮಠ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಗೋಣಿಕೊಪ್ಪ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಎಂ.ಎಸ್ಸಿ (ಭೌತಶಾಸ್ತ್ರ) ಪದವೀಧರರಾಗಿರುವ ಅವರು, ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಕೆಲಕಾಲ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. 1991ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿ ಸರ್ಕಾರಿ ಸೇವೆ ಆರಂಭಿಸಿದರು. ಸೇವೆಯಲ್ಲಿ ಬಡ್ತಿ ಪಡೆದು ಜೂನ್ 2015 ರಲ್ಲಿ ಕರ್ನಾಟಕ ಆಡಳಿತ ಸೇವೆಯಿಂದ ಭಾರತೀಯ ಆಡಳಿತ ಸೇವೆಯ 2010 ರ ತಂಡಕ್ಕೆ ಸೇರ್ಪಡೆಯಾದರು. ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾಗಿ, ಹುಬ್ಬಳ್ಳಿ-ಧಾರವಾಡದ ಬಿ.ಆರ್.ಟಿ.ಎಸ್ ಕಂಪನಿ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಇದಾದ ಬಳಿಕ ಆಗಸ್ಟ್ 2018 ರಿಂದ ಇಲ್ಲಿಯವರೆಗೆ ಗದಗ ಜಿಲ್ಲಾಧಿಕಾರಿಗಳಾಗಿ ಎಂ.ಜಿ.ಹಿರೇಮಠ ಅವರು ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಬೆಳಗಾವಿ ಜಿಲ್ಲಾಧಿಕಾರಿ ಆಗಿ ಸೇವೆ ಮುಂದುವರೆಸಲಿದ್ದಾರೆ.