ಬೆಳಗಾವಿ ದೆಹಲಿ ವಿಮಾನದಲ್ಲಿ ಕನ್ನಡತನ ಮೆರೆದ ಪೈಲಟ್ ಬೆಳಗಾವಿ:ಬೆಳಗಾವಿ - ದೆಹಲಿ ಮಧ್ಯೆ ನೇರ ವಿಮಾನ ಸೇವೆ ಮತ್ತೆ ಆರಂಭವಾಗಿದೆ. ಕುಂದಾನಗರದಿಂದ ರಾಷ್ಟ್ರ ರಾಜಧಾನಿಗೆ ಪ್ರಯಾಣಿಸುವವರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ವಿಶೇಷ ಎಂದರೆ ಗುರುವಾರ ಪುನಾರಂಭವಾದ ವಿಮಾನದಲ್ಲಿ ಕನ್ನಡದಲ್ಲೇ ಅನೌನ್ಸಮೆಂಟ್ ಮಾಡುವ ಮೂಲಕ ಬೆಳಗಾವಿ ಮೂಲದ ಪೈಲಟ್ ಭಾಷಾಭಿಮಾನ ಮೆರೆಯಲಾಗಿದೆ.
ಇಂಡಿಗೋ ಸಂಸ್ಥೆ ಆರಂಭಿಸಿದ ವಿಮಾನ ಹಾರಾಟಕ್ಕೆ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಗುರುವಾರ ಚಾಲನೆ ನೀಡಲಾಯಿತು. ಈ ವೇಳೆ, ಸಂಸದೆ ಮಂಗಳಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಆಸೀಫ್ ಸೇಠ್, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ವಿಮಾನ ನಿಲ್ದಾಣದ ನಿರ್ದೇಶಕ ತ್ಯಾಗರಾಜನ್, ಪೈಲಟ್ ಅಕ್ಷಯ ಪಾಟೀಲ ಸೇರಿ ಮತ್ತಿತರರು ಇದ್ದರು.
ಗುರುವಾರ ಮಧ್ಯಾಹ್ನ 3.45ಕ್ಕೆ ಬಂದಿಳಿದ ವಿಮಾನಕ್ಕೆ ವಾಟರ್ ಕ್ಯಾನನ್ ಸೆಲ್ಯೂಟ್ ನೀಡಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ದೆಹಲಿಯಿಂದ ಮೊದಲ ವಿಮಾನದಲ್ಲಿ 116 ಪ್ರಯಾಣಿಕರು ಸಾಂಬ್ರಾಕ್ಕೆ ಬಂದಿಳಿದರು. ನಂತರ ಅದೇ ವಿಮಾನದಲ್ಲಿ ಇಲ್ಲಿಂದ ದೆಹಲಿಗೆ 135 ಮಂದಿ ಪ್ರಯಾಣ ಬೆಳೆಸಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಇದೀಗ ಈಡೇರಿದೆ. ಈ ವಿಮಾನ ನಿಲ್ದಾಣ ಲಾಭದಾಯಕ ಆಗಲು ಮತ್ತಷ್ಟು ಶ್ರಮಿಸಬೇಕಿದೆ. ಈಗ ಕೇವಲ ಎರಡೂವರೆ ತಾಸಿನಲ್ಲಿ ದೆಹಲಿ ತಲುಪಲು ಸಾಧ್ಯವಾಗುತ್ತಿದೆ. ನಗರದ ಅಭಿವೃದ್ಧಿ ದೃಷ್ಟಿಯಿಂದ ಇದು ಉತ್ತಮ ಪ್ರಯತ್ನ. ಸಾಂಬ್ರಾ ವಿಮಾನ ನಿಲ್ದಾಣ ಅಭಿವೃದ್ಧಿಗೆ ಅಗತ್ಯವಿರುವ ಜಮೀನು ನೀಡಿ ಅಭಿವೃದ್ಧಿಪಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೂ ಮನವಿ ಮಾಡಿದ್ದೇವೆ ಎಂದರು.
ಕನ್ನಡತನ ಮೆರೆದ ಪೈಲಟ್:ಪೈಲಟ್ ಅಕ್ಷಯ ಪಾಟೀಲ ಅಚ್ಚ ಬೆಳಗಾವಿ ಕನ್ನಡದಲ್ಲೇ ಅನೌನ್ಸಮೆಂಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಬೈಲಹೊಂಗಲದವರಾದ ಅಕ್ಷಯ ಪಾಟೀಲ ಈ ಹಿಂದೆಯೂ ಅನೇಕ ಬಾರಿ ಕನ್ನಡದಲ್ಲೇ ಅನೌನ್ಸ್ ಮಾಡಿ ಅಭಿಮಾನ ಮೆರೆದಿದ್ದರು. ದಿಲ್ಲಿ ದೂರ ಎನ್ನುತ್ತಿದ್ದೆವು. ಆದರೆ, ಈಗ ಕೇವಲ 2 ಗಂಟೆ 20 ನಿಮಿಷದಲ್ಲಿ ದಿಲ್ಲಿಗೆ ಹೋಗಬಹುದು. ನಮ್ಮ ಭಾಗದ ವಿಮಾನ ನಿಲ್ದಾಣಗಳು ಅಂತಾರಾಷ್ಟ್ರೀಯ ಮಾದರಿಯಲ್ಲಿ ಅಭಿವೃದ್ಧಿ ಆಗಿ, ನಮ್ಮ ಜನರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು. ಇವರ ಕನ್ನಡದಲ್ಲೇ ಸಂದೇಶ ನೀಡಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಬೆಳಗಾವಿ ದೆಹಲಿ ನೇರ ವಿಮಾನ ಸೇವೆ ಪುನಾರಂಭ
ಬೆಳಗಾವಿ ಟು ದೆಹಲಿ ವಿಮಾನ ಸೇವೆ:ಪ್ರತಿದಿನ ದೆಹಲಿಯಿಂದ ಮಧ್ಯಾಹ್ನ 3.45ಕ್ಕೆ ಹೊರಡುವ ಈ ವಿಮಾನವು ಸಂಜೆ 6.05ಕ್ಕೆ ಸಾಂಬ್ರಾ ವಿಮಾನ ನಿಲ್ದಾಣ ತಲುಪುತ್ತದೆ. ಇಲ್ಲಿಂದ ಸಂಜೆ 6.35ಕ್ಕೆ ಹೊರಟು ರಾತ್ರಿ 9 ಗಂಟೆಗೆ ದೆಹಲಿ ತಲುಪಲಿದೆ. ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಂ (ಐಎಲ್‌ಎಸ್) ವ್ಯವಸ್ಥೆಯನ್ನು ಈ ವಿಮಾನಕ್ಕೆ ಅಳವಡಿಸಿದ್ದು, ಮೋಡ ಕವಿದ ವಾತಾವರಣ, ಮಳೆ ಸೇರಿದಂತೆ ವಿಷಮ ಸ್ಥಿತಿಗಳಲ್ಲೂ ಈ ವಿಮಾನ ಹಾರಾಟ ನಡೆಸಲಿದೆ.
ಈ ಹಿಂದೆಯೂ ಬೆಳಗಾವಿ- ದೆಹಲಿ ನಡುವೆ ನೇರ ವಿಮಾನ ಸೇವೆ ಇತ್ತು. ಆದರೆ, ಕಾರಣಾಂತರಗಳಿಂದ ವಿಮಾನ ಸಂಸ್ಥೆಗಳು ಸಂಚಾರ ಸ್ಥಗಿತಗೊಳಿಸಿದ್ದವು. ಪರಿಣಾಮ ಜನರು ಹುಬ್ಬಳ್ಳಿ ಇಲ್ಲವೇ ಗೋವಾ ವಿಮಾನ ನಿಲ್ದಾಣಗಳಿಂದ ದೆಹಲಿಗೆ ಹೋಗುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಈಗ ಜಿಲ್ಲೆ ಹಾಗೂ ಪಕ್ಕದ ಜಿಲ್ಲೆಗಳ ಹಲವು ಪ್ರಯಾಣಿಕರು, ಉದ್ಯಮಿಗಳು ಹಾಗೂ ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ ಪುನಃ ವಿಮಾನ ಹಾರಾಟ ಆರಂಭವಾಗಿರುವುದು ಇಲ್ಲಿನ ಜನತೆಗೆ ಸಂತಸ ತಂದಿದೆ.
ಇದನ್ನೂ ಓದಿ: ಇಂಡಿಗೋ ವಿಮಾನದಲ್ಲಿ ಶಿವಮೊಗ್ಗಕ್ಕೆ ಬಂದಿಳಿದ ಪ್ರಯಾಣಿಕರ ಅನುಭವದ ಮಾತುಗಳು