ಬೆಳಗಾವಿ :ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಡಾ.ಕೆ.ಹರೀಶ್‍ಕುಮಾರ್ ನೇತೃತ್ವದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ತಡೆಗೆ ಮುಂಜಾಗ್ರತಾ ಕ್ರಮವಾಗಿ ಎಲ್ಲ ತಾಲೂಕಿನ ತಹಶೀಲ್ದಾರ್‌ರ ಜೊತೆಗೆ ಡಿಸಿ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದರು.
ಸಭೆಯಲ್ಲಿ ಜಾತ್ರೆಯಾಗಲಿ, ಮದುವೆ ಹಾಗೂ ಯಾವುದೇ ಸಮಾರಂಭಗಳಲ್ಲಿ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಆದ್ರೆ ಅದಕ್ಕೆ ತಹಶೀಲ್ದಾರರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್‍ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ಬಿಗಿ ಕ್ರಮಗಳ ಬಗ್ಗೆ ಡಿಸಿ ಡಾ. ಕೆ ಹರೀಶ್‍ಕುಮಾರ್ ಪ್ರತಿಕ್ರಿಯೆ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಚ್ಚು ಹೆಚ್ಚು ಕೋವಿಡ್ ಟೆಸ್ಟ್, ವ್ಯಾಕ್ಸಿನೇಷನ್‌ಗೂ ಹೆಚ್ಚಿನ ಗಮನ ಕೊಟ್ಟಿದ್ದೇವೆ. ಉಪ ಚುನಾವಣೆ ಹಿನ್ನೆಲೆ ಕೋವಿಡ್ ನಿರ್ವಹಣೆಗೆ ಅಧಿಕಾರಿಗಳ ಜವಾಬ್ದಾರಿ ಫಿಕ್ಸ್ ಮಾಡಲು ಸಾಧ್ಯವಾಗಿರಲಿಲ್ಲ.
ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆ ಕರೆದು ಜವಾಬ್ದಾರಿ ಫಿಕ್ಸ್ ಮಾಡಿದ್ದೇವೆ. ನಗರ ಪ್ರದೇಶಗಳಲ್ಲಿ ಜನ ಸೇರೋದನ್ನು ನಿಯಂತ್ರಿಸಲು ಸೂಚಿಸಿದ್ದೇವೆ. ಆದ್ರೆ, ಜನರ ಓಡಾಟಕ್ಕೆ ನಾವು ಯಾವುದೇ ರೀತಿ ನಿರ್ಬಂಧಿಸಿಲ್ಲ. ಜನ ಓಡಾಡುವಾಗ ಕೋವಿಡ್ ಮಾರ್ಗಸೂಚಿ ಪಾಲಿಸಬೇಕು.
ಸರ್ಕಾರದ ನಿರ್ದೇಶನ ಕಡ್ಡಾಯವಾಗಿ ಪಾಲಿಸಲು ನಗರ ಸ್ಥಳೀಯ ಸಂಸ್ಥೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಸಂಬಂಧಿಸಿದ ಉಪವಿಭಾಗಾಧಿಕಾರಿ, ತಹಶೀಲ್ದಾರ್‌ರಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದೇವೆ ಎಂದರು.
ನಾಳೆಯಿಂದ ಪಿಯುಸಿ ಪೂರಕ ಪರೀಕ್ಷೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪಿಯುಸಿ ಪ್ರಿಪರೇಟರಿ ಎಕ್ಸಾಂ ರದ್ದು ಮಾಡುವ ಬಗ್ಗೆ ಡಿಡಿಪಿಯು ಜತೆ ಚರ್ಚೆ ಮಾಡಲಾಗುವುದು. ಎಕ್ಸಾಂ ನಿಲ್ಲಿಸಿ ಅಂತ ಸರ್ಕಾರ ಹೇಳಿದ್ರೆ ನಿಲ್ಲಿಸ್ತೀವಿ, ಮಾಡಿ ಅಂದ್ರೆ ಮಾಡ್ತೇವೆ ಎಂದು ಜಿಲ್ಲಾಧಿಕಾರಿ ಹರೀಶ್‌ಕುಮಾರ್ ಹೇಳಿದರು.
ಮದುವೆಗೆ ಅನುಮತಿ ಕಡ್ಡಾಯ :ಯಾವುದೇ ರೀತಿಯ ಅನುಮತಿ ಇಲ್ಲದೇ ಯಾರೂ ಕೂಡ ಮದುವೆ ಮಾಡುವಂತಿಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ ಹೆಚ್ ಹೇಳಿದರು. ನಗರದಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುತ್ತದೆ. ಅದರಂತೆ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡದಿರುವ ಮಾಲ್‍ಗಳನ್ನು ಮುಚ್ಚಿಸಿ ಎಫ್‍ಐಆರ್ ದಾಖಲಿಸಲಾಗುತ್ತಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಮದುವೆಗಳಿಗೆ ಅನುಮತಿ ಪಡೆಯಲೇಬೇಕು ಎಂದರು.
ಕೊರೊನಾ ಕುರಿತ ಬಿಗಿ ಕ್ರಮಗಳ ಬಗ್ಗೆ ಪಾಲಿಕೆ ಆಯುಕ್ತರಿಂದ ಮಾಹಿತಿ.. ಕೋವಿಡ್ ಪರೀಕ್ಷೆ, ಲಸಿಕೆ ನೀಡುವುದನ್ನು ಹೆಚ್ಚಿಸುವುದು ಹಾಗೂ ನಗರದಲ್ಲಿ ವಿಶೇಷವಾಗಿ ಎಲ್ಲೆಲ್ಲಿ ಜಾತ್ರೆ, ಎಪಿಎಂಸಿ, ಮಾಲ್‍ಗಳು ಸೇರಿ ಜನಜಂಗುಳಿ ಸೇರುತ್ತೋ ಅಲ್ಲೆಲ್ಲ ಸೂಕ್ತ ಕ್ರಮ ಕೈಗೊಳ್ಳುವಂತೆ ಈಗಾಗಲೇ ನಮಗೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದ್ದಾರೆ.
ಪೊಲೀಸ್ ಇಲಾಖೆಯೊಂದಿಗೆ ಕಾರ್ಯಾಚರಣೆ ಮಾಡಲಾಗುತ್ತದೆ. ಮಾಸ್ಕ್ ಧರಿಸದವರಿಗೆ ದಂಡ ವಿಧಿಸುತ್ತೇವೆ. ನಮ್ಮ ಸೂಚನೆ ಪಾಲಿಸದ ಮಾಲ್‍ಗಳನ್ನು ಮುಚ್ಚಿಸುತ್ತೇವೆ ಎಂದು ತಿಳಿಸಿದ್ರು. ಯಾವುದೇ ಕಲ್ಯಾಣ ಮಂಟಪದಲ್ಲಿ ಅನುಮತಿ ಇಲ್ಲದೇ ಯಾರೂ ಕೂಡ ಮದುವೆ ಮಾಡುವಂತಿಲ್ಲ.
ಮದುವೆ ಮನೆಗೆ ನಮ್ಮದೊಂದು ತಂಡ ಬರಲಿದೆ. ಅವರೊಂದಿಗೆ ವಿಡಿಯೋ ಗ್ರಾಫರ್ಗಳು ಆಗಮಿಸುತ್ತಾರೆ. ಇದಲ್ಲದೇ ಮದುವೆ ಮನೆಯವರು ಮದುವೆಗೆ ಯಾರ್ಯಾರು ಬರುತ್ತಾರೆ ಎಂಬ ಹೆಸರನ್ನು ಕೊಟ್ಟರೆ ಮಾತ್ರ ಮದುವೆಗೆ ಅನುಮತಿ ನೀಡಲಾಗುತ್ತದೆ ಎಂದರು.
ದಿನಕ್ಕೆ 15ರಿಂದ 30 ಸಾವಿರ ಜನರಿಗೆ ವ್ಯಾಕ್ಸಿನೇಷನ್ :ಬೆಳಗಾವಿ ಜಿಲ್ಲೆಯಲ್ಲಿ ಈವರೆಗೂ 4 ಲಕ್ಷ 24 ಸಾವಿರ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಸದ್ಯ 55 ಸಾವಿರ ಕೋವಿಡ್ ವ್ಯಾಕ್ಸಿನ್ ಇದೆ ಎಂದು ಜಿಲ್ಲಾ ಲಸಿಕಾಕರಣ ಅನುಷ್ಠಾನ ಅಧಿಕಾರಿ ಡಾ.ಈಶ್ವರ್ ಗಡಾದ್ ಹೇಳಿದರು. ಜಿಲ್ಲೆಯಲ್ಲಿ ದಿನಕ್ಕೆ 15ರಿಂದ 30 ಸಾವಿರ ಜನರಿಗೆ ವ್ಯಾಕ್ಸಿನೇಷನ್ ಮಾಡುತ್ತಿದ್ದೇವೆ. ಇನ್ನೂ ಮೂರು ದಿನ ಲಸಿಕಾಕರಣ ಮಾಡುವಷ್ಟು ವ್ಯಾಕ್ಸಿನ್ ನಮ್ಮ ಹತ್ತಿರವಿದೆ.
ಜಿಲ್ಲಾ ಲಸಿಕಾಕರಣ ಅನುಷ್ಠಾನ ಅಧಿಕಾರಿ ಡಾ.ಈಶ್ವರ್ ಗಡಾದ್.. ಸದ್ಯ ಜಿಲ್ಲೆಯಲ್ಲಿ 326 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. 190ರಿಂದ 225 ಕೇಂದ್ರಗಳು ನಿರಂತರ ಬಾಗಿಲು ತೆರೆದು ಲಸಿಕೆ ನೀಡುವಲ್ಲಿ ಶ್ರಮವಹಿಸುತ್ತಿವೆ. ದಿನಕ್ಕೆ ಅಂದಾಜು 15000 ಜನರಿಗೆ ಲಸಿಕೆ ನೀಡಲಾಗುತ್ತಿದೆ. ಒಂದು ದಿನದಲ್ಲಿ ಗರಿಷ್ಠ 29,154 ಲಸಿಕೆ ನೀಡಿದ ಹೆಗ್ಗಳಿಕೆ ನಮ್ಮದು ಎಂದು ಡಾ.ಗಡಾದ್ ಹೇಳಿದರು.