ಬೆಳಗಾವಿ :ಎಂ ಕೆ ಹುಬ್ಬಳ್ಳಿಯಲ್ಲಿ ಡಾಬಾ ಮಾಲೀಕನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರು ಆರೋಪಿಗಳನ್ನು ಕಿತ್ತೂರು ಪೊಲೀಸರು 24 ಗಂಟೆಗಳೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಿತ್ತೂರು ತಾಲೂಕು ಎಂ ಕೆ ಹುಬ್ಬಳ್ಳಿ ಗ್ರಾಮದ ಅಬ್ದುಲ್ ಅಝೀಜ್ ಬಡೇಗಾರ(38), ಮಹಮ್ಮದ್ ಶಫೀ, ಸದ್ದಾಂ ಬಡೇಗಾರ (28), ಶಬೀಲ್ ಅಹಮದ್ (28), ಇರ್ಫಾನ್ ಬಡೇಗಾರ (29) ಹಾಗೂ ಸಾಜೀದ್ ಬಡೇಗಾರ 20) ಬಂಧಿತ ಆರೋಪಿಗಳು.
ಇವರು ಕೇವಲ 1,500 ರೂಪಾಯಿ ಹಣದ ವಿಚಾರಕ್ಕೆ ಬೈಲಹೊಂಗಲ ತಾಲೂಕು ನಿವಾಸಿ ಡಾಬಾ ಮಾಲೀಕ ಪ್ರಕಾಶ್ ನಾಗನೂರು ಎಂಬುವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು. ತೀವ್ರವಾಗಿ ಹಲ್ಲೆಗೊಳಗಾದ ಪ್ರಕಾಶ್, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದರು.
ಓದಿ : ಎಂ.ಕೆ. ಹುಬ್ಬಳ್ಳಿಯಲ್ಲಿ ಹಣದ ವಿಚಾರಕ್ಕೆ ಡಾಬಾ ಮಾಲೀಕನ ಕೊಲೆ
ಘಟನೆ ಸಂಬಂಧಪಟ್ಟಂತೆ ಪ್ರಕರಣ ದಾಖಲಿಸಿಕೊಂಡ ಕಿತ್ತೂರು ಪೊಲೀಸರು, 24 ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಆರೋಪಿಗಳ ಪತ್ತೆ ಕಾರ್ಯಾಚರಣೆ ಎಸ್ಪಿ ಲಕ್ಷ್ಮಣ ನಿಂಬರಗಿ, ಡಿಎಸ್ಪಿ ಶಿವಾನಂದ ಕಟಗಿ ಮಾರ್ಗದರ್ಶನದಲ್ಲಿ ನಡೆಯಿತು. ಸಿಪಿಐ ಮಂಜುನಾಥ ಕುಸುಗಲ್, ಪಿಎಸ್ಐ ಎಸ್ ಬಿ ಮಾವಿನಕಟ್ಟಿ ನೇತೃತ್ವದಲ್ಲಿ ಆರ್ ಎಸ್ ಶೀಲಿ, ಎಸ್ ಎಸ್ ಕಾಜಗಾರ, ಬಿ ಎಸ್ ಪತ್ತಾರ್, ಆರ್ ಕೆ ಗಜೇರಿ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.