ಬೆಳಗಾವಿ: ಕೊರೊನಾ ಅಟ್ಟಹಾಸಕ್ಕೆ ಇಡೀ ದೇಶವೇ ತತ್ತರಿಸಿ ಹೋಗಿದ್ದು ಲಸಿಕೆ ಕಂಡು ಹಿಡಿಯುವುದರಲ್ಲಿ ಜಗತ್ತಿನ ಹಲವಾರು ಕಂಪನಿಗಳು ಬ್ಯುಸಿಯಾಗಿವೆ. ಅದರಲ್ಲಿ ಭಾರತದಲ್ಲಿ ದೇಶಿಯ ಕಂಪನಿಗಳು ಸಿದ್ದಪಡಿಸಿದ ಲಸಿಕೆಯೊಂದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಲಸಿಕೆ ಪಡೆದವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವ ಬಗ್ಗೆ ಕ್ಲಿನಿಕಲ್ ಟ್ರಯಲ್‌ನಿಂದ ಗೊತ್ತಾಗಿದೆ. ಈ ಕ್ಲಿನಿಕಲ್ ಟ್ರಯಲ್ ಪಡೆದ ದಂಪತಿಯೊಬ್ಬರು ಆರೋಗ್ಯವಂತರಾಗಿದ್ದು, ಅವರಲ್ಲಿ ಪ್ರತಿಕಾಯ ಶಕ್ತಿ ಕೂಡ ಹೆಚ್ಚಾಗಿದೆ.
ಕೊವ್ಯಾಕ್ಸಿನ್ ಕ್ಲಿನಿಕಲ್ ಟ್ರಯಲ್ ಪಡೆದ ಮೊದಲ ದಂಪತಿ.. ಹೌದು, ಮೂಲತಃ ಬೈಲಹೊಂಗಲ ಪಟ್ಟಣದ ಗೊಂಬಿಗುಡಿ ಓಣಿಯ ದಂಪತಿ ಸುಜೀತ ಮುಳಗುಂದ ಹಾಗೂ ಪತ್ನಿ ಸುಷ್ಮಾ ಮುಳಗುಂದ ನಗರದ ಜೀವನ್ ರೇಖಾ ಆಸ್ಪತ್ರೆಯಲ್ಲಿ 2ನೇ ಹಂತದಲ್ಲಿ ಕೊವ್ಯಾಕ್ಸಿನ್ ಕ್ಲಿನಿಕಲ್ ಟ್ರಯಲ್ ಲಸಿಕೆ ಪಡೆದುಕೊಂಡವರು. ಇವರು ಬೆಳಗಾವಿಯ ಸದಾಶಿವ ನಗರದಲ್ಲಿ ಕಳೆದ 15 ವರ್ಷಗಳಿಂದ ಸ್ವಂತ ಉದ್ಯೋಗ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಲಸಿಕೆ ಪಡೆದು ಆರೋಗ್ಯವಂತರಾಗಿದ್ದು, ಈಟಿವಿ ಭಾರತದೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಪ್ರಧಾನಿ ಮೋದಿಯವರ ಆಹ್ವಾನದ ಮೇರೆಗೆ ನಾವು ಕ್ಲಿನಿಕಲ್ ಟ್ರಯಲ್‌ನಲ್ಲಿ ಭಾಗವಹಿಸಿ 2ನೇ ಹಂತದ ವೇಳೆ ಲಸಿಕೆಯನ್ನು ಪಡೆದಿದ್ದೇವೆ. ಲಸಿಕೆ ಪಡೆದು 135 ದಿನಗಳಾಗಿದ್ದು, ಯಾವುದೇ ರೀತಿಯ ಸೈಡ್ ಎಫೆೆಕ್ಟ್ ಮತ್ತು ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ. ಲಸಿಕೆ ಪಡೆದಿದ್ದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಮತ್ತಷ್ಟು ಹೆಚ್ಚು ಕೆಲಸ ಮಾಡುವ ಉತ್ಸಾಹ ಬರುತ್ತಿದೆ. ಹೀಗಾಗಿ ಪ್ರತಿಯೊಬ್ಬರು ಸ್ವಯಂ ಪ್ರೇರಣೆಯಿಂದ ಕ್ಲಿನಿಕಲ್ ಟ್ರಯಲ್‌ನಲ್ಲಿ ಭಾಗಿಯಾಗಬೇಕೆಂದು ತಿಳಿಸಿದ್ದಾರೆ.
ಭರವಸೆ ಮೂಡಿಸಿದ ಕೊವ್ಯಾಕ್ಸಿನ್ ಲಸಿಕೆ:
ಭಾರತದ ಐಸಿಎಂಆರ್ ಹಾಗೂ ಹೈದ್ರಾಬಾದ್‌ನ ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿ ಪಡಿಸಿದ ಹಾಗೂ ಹೊಸ ಭರವಸೆ ಮೂಡಿಸಿರುವ ಕೊವ್ಯಾಕ್ಸಿನ್ ಈಗಾಗಲೇ ಎರಡು ಟ್ರಯಲ್ ಮುಗಿಸಿ 3ನೇ ಟ್ರಯಲ್‌ನ ಅಂತಿಮ ಘಟ್ಟಕ್ಕೆ ತಲುಪಿದೆ. ಇನ್ನೇನು ಮುರ್ನಾಲ್ಕು ತಿಂಗಳಲ್ಲಿ ದೇಶಾದ್ಯಂತ ಲಸಿಕೆ ಬಿಡುಗಡೆಯಾಗುವ ಮುನ್ಸೂಚನೆಯಿದೆ. ಈವರೆಗೂ ಕೊವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಯಾವುದೇ ರೀತಿಯ ಸೈಡ್ ಎಫೆೆಕ್ಟ್ ಆಗದೆ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗಿರುವುದು ಕಂಡು ಬಂದಿದೆ.
1200 ಮಂದಿಗೆ ಕೊವ್ಯಾಕ್ಸಿನ್ ಟ್ರಯಲ್:
ಜಿಲ್ಲೆಯಲ್ಲಿ ಈವರೆಗೆ 1200ಕ್ಕೂ ಹೆಚ್ಚಿನ ಜನರು ಕೊವ್ಯಾಕ್ಸಿನ್ ಪಡೆದಿದ್ದು, ಯಾರೊಬ್ಬರಿಗೂ ವ್ಯತಿರಿಕ್ತ ಪರಿಣಾಮವಾಗಿಲ್ಲ. ವ್ಯಾಕ್ಸಿನ್ ಪಡೆದುಕೊಂಡ ಜನರು ಆರೋಗ್ಯವಂತರಾಗಿದ್ದಾರೆ. ಅವರಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗಿದೆ. ಒಂದು ಮತ್ತು ಎರಡನೇ ಹಂತದಲ್ಲಿ ಲಸಿಕೆ ನೀಡಿದ್ದು, ಉತ್ತಮ ಫಲಿತಾಂಶ ಕೂಡ ಬಂದಿದೆ. ಯಾವೊಂದು ಸಮಸ್ಯೆ ಕಾಣಿಸಿಕೊಂಡಿಲ್ಲ ಎಂಬುವುದು ವೈದ್ಯ ಡಾ. ಅಮಿತ್ ಭಾತೆ ಅವರ ಮಾತು.
18 ವರ್ಷ ಮೇಲ್ಪಟ್ಟ ಹಾಗೂ 50 ವರ್ಷದೊಳಗಿನ ಜನರಿಗೆ ಮಾತ್ರ ವ್ಯಾಕ್ಸಿನ್:
ಐಸಿಎಂಆರ್ ಹಾಗೂ ಹೈದ್ರಾಬಾದ್‌ನ ಭಾರತ್ ಬಯೋಟೆಕ್ ಕಂಪನಿ ಜತೆಗೂಡಿ ಅಭಿವೃದ್ದಿಪಡಿಸಿರುವ ಈ ಕೊವ್ಯಾಕ್ಸಿನ್ ಲಸಿಕೆಯನ್ನು 18 ವರ್ಷ ಮೇಲ್ಪಟ್ಟ ಹಾಗೂ 50 ವರ್ಷದೊಳಗಿನ ಆರೋಗ್ಯವಂತ ವ್ಯಕ್ತಿಗಳ ಮೇಲೆ ಕ್ಲಿನಿಕಲ್ ಟ್ರಯಲ್ ಮಾಡಲಾಗುತ್ತಿದೆ. ಅನಾರೋಗ್ಯ, ಕೊರೊನಾ ಬಂದಿರುವ ಹಾಗೂ ಕೊರೊನಾ ವೈರಸ್ ಬಂದು ಹೋಗಿರುವ ವ್ಯಕ್ತಿಗಳಿಗೆ ಕೊವ್ಯಾಕ್ಸಿನ್ ಕ್ಲಿನಿಕಲ್ ಪ್ರಯೋಗ ಮಾಡುತ್ತಿಲ್ಲ. ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಜನಸಾಮಾನ್ಯರಿಂದ ಹಿಡಿದು ವಿವಿಐಪಿವರೆಗೂ ಕೂಡ ಈ ಕೊವ್ಯಾಕ್ಸಿನ್ ನೀಡಲಾಗಿದೆ. ವ್ಯಾಕ್ಸಿನ್ ಪಡೆದವರನ್ನು ಪ್ರತಿ ತಿಂಗಳು ತಪಾಸಣೆಗೊಳಪಡಿಸಲಾಗುತ್ತಿದೆ. ಯಾರಿಗೂ ಕೂಡ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಾರದ ಹಿನ್ನೆಲೆಯಲ್ಲಿ ಪೋನ್ ಮೂಲಕ ಎಲ್ಲರ ಮೇಲೆ ನಿಗಾ ಇಡಲಾಗಿದೆ.
ಯುವಕರು ಸ್ವಪ್ರೇರಣೆಯಿಂದ ಕ್ಲಿನಿಕಲ್ ಟ್ರಯಲ್‌ನಲ್ಲಿ ಭಾಗಿಯಾಗಬೇಕು:
ದೇಶದ ಪ್ರಧಾನಿ ನರೇಂದ್ರ ಮೋದಿಯವರೇ ಕೊವ್ಯಾಕ್ಸಿನ್ ಟ್ರಯಲ್ ಲಸಿಕೆ ಪಡೆದುಕೊಳ್ಳಿ ಎಂದು ದೇಶದ ಜನರಲ್ಲಿ ಮನವಿ ಮಾಡಿಕೊಂಡಿದ್ದರು. ಆದರೂ, ಭಯಪಡುತ್ತಿರುವ ಜನರು ಏನಾದರೂ ಸೈಡ್ ಎಫೆಕ್ಟ್ ಆಗಬಹುದೆಂಬ ಕಾರಣ ವ್ಯಾಕ್ಸಿನ್ ಪಡೆದುಕೊಳ್ಳಲು ಮುಂದೆ ಬರುತ್ತಿಲ್ಲ. ಈಗಾಗಲೇ 2ನೇ ಹಂತದ ಕೊವ್ಯಾಕ್ಸಿನ್ ಟ್ರಯಲ್ ಲಸಿಕೆ ಪಡೆದುಕೊಂಡ ಕರ್ನಾಟಕದ ಮೊದಲ ದಂಪತಿ ಎನ್ನಲಾದ ಸುಜೀತ ಮುಳಗುಂದ ಕೂಡ ಯುವಕರಲ್ಲಿ ಕೊವ್ಯಾಕ್ಸಿನ್ ಲಸಿಕೆ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಬ್ರಿಟನ್ ವೈರಸ್‌ಗೂ ಕೊವ್ಯಾಕ್ಸಿನ್ ಪ್ರಯೋಗ:
ಸದ್ಯ ದೇಶ-ವಿದೇಶಗಳಲ್ಲಿ ಕೊರೊನಾ 2ನೇ ಅಲೆ (ಬ್ರಿಟನ್ ವೈರಸ್) ಆರಂಭವಾಗಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಇಂಗ್ಲೆಂಡ್ ಸೇರಿದಂತೆ ಕೆಲವೊಂದು ದೇಶಗಳಲ್ಲಿ ಪುನಃ ಲಾಕ್‌ಡೌನ್ ಘೋಷಿಸಲಾಗಿದೆ. ಇತ್ತ ರಾಜ್ಯದಲ್ಲಿಯೂ ಕೂಡ ಕರ್ನಾಟಕ ಸರ್ಕಾರ ನೈಟ್ ಕರ್ಫ್ಯೂ ಘೋಷಣೆ ಮಾಡಿ ವಾಪಸ್ ಪಡೆದುಕೊಂಡಿತ್ತು. ಹೀಗಾಗಿ ಐಸಿಎಂಆರ್ ಹಾಗೂ ಹೈದ್ರಾಬಾದ್‌ನ ಭಾರತ್ ಬಯೋಟೆಕ್ ಕಂಪನಿಯೂ ಕೊರೊನಾ 2ನೇ ಅಲೆ (ಬ್ರಿಟನ್ ವೈರಸ್) ಗೆ ಕೊವ್ಯಾಕ್ಸಿನ್ ಪ್ರಯೋಗಕ್ಕೂ ಮುಂದಾಗಿದೆ. ಇದು ಬ್ರಿಟನ್ ವೈರಸ್‌ಗೂ ಪರಿಣಾಮಕಾರಿ ಆಗಬಹುದು. ಇನ್ನು ಮೂರ್ನಾಲ್ಕು ತಿಂಗಳಲ್ಲಿ ವ್ಯಾಕ್ಸಿನ್ ಮಾರುಕಟ್ಟೆಗೆ ಬರಹುದು ಎಂದು ವೈದ್ಯ ಡಾ. ಅಮೀತ್ ಭಾತೆ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.