ಬೆಳಗಾವಿ: ಮಹಾನಗರ ಪಾಲಿಕೆಯಿಂದ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲಾಗಿದ್ದು, ಬಿಗಿ ಪೊಲೀಸ್ ಭದ್ರತೆಯಲ್ಲಿ ನಗರದ ಗೋವಾವೇಸ್ ವೃತ್ತದಲ್ಲಿ ಮನೆಗಳು, ಅಂಗಡಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ, ಪೊಲೀಸರು ಮತ್ತು ಕುಟುಂಬಸ್ಥರು ನಡುವೆ ಮಾತಿನ ಚಕಮಕಿ ನಡೆಯಿತು.
ನಗರದ ಗೋವಾವೇಸ್ ವೃತ್ತದಲ್ಲಿ ಮಹಾನಗರ ಪಾಲಿಕೆ ಖಾಲಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದ ಐದಕ್ಕೂ ಅಧಿಕ ಮನೆಗಳು, ಗ್ಯಾರೇಜ್, ಗುಜರಿ ಅಂಗಡಿ ತೆರವು ಮಾಡಲಾಯಿತು. ಈ ವೇಳೆ ಕುಟುಂಬಸ್ಥರು, ಅಂಗಡಿ ಮಾಲೀಕರು, ಮಹಿಳೆಯರು ತೆರವು ಮಾಡಲು ಬಿಡುವುದಿಲ್ಲ ಅಂತಾ ಪಟ್ಟುಹಿಡಿದಿದ್ದಲ್ಲದೇ ಮನೆಯ ಮುಂಭಾಗದಲ್ಲಿ ಧರಣಿ ಕುಳಿತು ಕಣ್ಣೀರಿಡುತ್ತಿದ್ದರು.
ಇನ್ನೂ ಪೊಲೀಸರು ಮತ್ತು ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಯಾವುದೇ ಕಾರಣಕ್ಕೂ ತೆರವು ಮಾಡಲು ಬಿಡಲ್ಲಾ ಅಂತಾ ಪಟ್ಟು ಹಿಡಿದಿದ್ದ ಜನರು, ಬಿಜೆಪಿ ಸರ್ಕಾರ ಮುಸ್ಲಿಂರಿಗೆ ಅನ್ಯಾಯ ಮಾಡ್ತಿದೆ ಅಂತಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಘೋಷಣೆ ಕೂಗಿದ ಓರ್ವನನ್ನ ಶಾಹಪುರ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಐದಕ್ಕೂ ಅಧಿಕ ಮನೆಗಳು, ಗ್ಯಾರೇಜ್, ಗುಜರಿ ಅಂಗಡಿ ತೆರವು ಕಾರ್ಯಾಚರಣೆ ಮಾಡಲಾಗಿದೆ. ಜೆಸಿಬಿಯಿಂದ ಒತ್ತುವರಿ ತೆರವು ಕಾರ್ಯಾಚರಣೆ ಮಾಡುತ್ತಿದ್ದಂತೆ ಸ್ಥಳದಲ್ಲಿ ಬಿಗುವಿಣ ವಾತಾವರಣ ನಿರ್ಮಾಣವಾಗಿದ್ದು, ಮೂವತ್ತಕ್ಕೂ ಅಧಿಕ ಪೊಲೀಸರು ಬಿಗಿ ಬಂದೋಬಸ್ತ್ ವಹಿಸಿದ್ದರು.
ಗಣಪತಿ ದೇವಸ್ಥಾನಕ್ಕೆ ನಿರ್ಮಿಸಿರುವ ಶೇಡ್ ತೆರವಿಗೆ ವಿರೋಧ:ಗೋವಾ ವೇಸ್ ವೃತ್ತದ ಬಳಿ ಸರ್ವೇ ನಂ.2026ಒತ್ತುವರಿ ಮಾಡಲಾಗುತ್ತಿದ್ದು, ಗಣಪತಿ ದೇವಸ್ಥಾನಕ್ಕೆ ನಿರ್ಮಿಸಿರುವ ಶೇಡ್ ತೆರವಿಗೆ ಹಿಂದೂಪರ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶ್ರೀರಾಮಸೇನೆ ಹಿಂದೂಸ್ತಾನ್ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ್, ಪಾಲಿಕೆ ಸದಸ್ಯ ಗಿರೀಶ್ ದೊಂಗಡಿ ಸೇರಿ ಹಿಂದೂಪರ ಕಾರ್ಯಕರ್ತರು ಸ್ಥಳದಲ್ಲಿ ಜಮಾವಣೆ ಆಗುತ್ತಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದೆ. ಸ್ಥಳದಲ್ಲಿ ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ.
ಯಾವುದೇ ಕಾರಣಕ್ಕೂ ಶೇಡ್ ತೆರವಿಗೆ ಬಿಡುವುದಿಲ್ಲ ಅಂತಾ ಹಿಂದೂಪರ ಕಾರ್ಯಕರ್ತರು ಪಟ್ಟುಹಿಡಿದ್ದಾರೆ. ಈಗಾಗಲೇ ಒತ್ತುವರಿಯಾಗಿರುವ ಮನೆಗಳನ್ನ ತೆರವು ಮಾಡಿದ್ದೇವೆ. ಶೇಡ್ ಮಾತ್ರ ತೆರವು ಮಾಡುತ್ತೇವೆ ಅವಕಾಶ ಕೊಡುವಂತೆ ಪೊಲೀಸರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ಸುರತ್ಕಲ್ ಟೋಲ್ ಗೇಟ್ ತೆರವು ಕಾರ್ಯಾಚರಣೆ ಪ್ರತಿಭಟನೆ: ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್