ಬೆಳಗಾವಿ: ಅಪಹರಣಗೊಂಡಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮದನಕುಮಾರ್ ಭೈರಪ್ಪನವರ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಅಪಹರಣಕಾರರು ಉದ್ಯಮಿ ಬಳಿಯಿದ್ದ ಹಣ, ಬಂಗಾರದ ಚೈನು ಸೇರಿದಂತೆ ಇತರ ವಸ್ತುಗಳನ್ನು ಕಸಿದುಕೊಂಡು ಖಾಲಿ ಪತ್ರಗಳಿಗೆ ಸಹಿ ಮಾಡಿಕೊಂಡು ಬಿಟ್ಟು ಕಳುಹಿಸಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ ಮದನಕುಮಾರ್ ಬೈರಪ್ಪನವರ ಈ ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ತೆರಳಿದ ಮಾಳಮಾರುತಿ ಪೊಲೀಸರು ಮದನಕುಮಾರ್ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಪ್ರಾಥಮಿಕ ತನಿಖೆ ನಡೆಸಿ, ಆರೋಗ್ಯ ತಪಾಸಣೆಗಾಗಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಪೊಲೀಸರ ತನಿಖೆ ಪ್ರಗತಿಯಲ್ಲಿದೆ.
ಬೆಳಗ್ಗೆ ಉದ್ಯಮಿಯನ್ನು ಅಪಹರಣ ಮಾಡಿದ್ದ ದುಷ್ಕರ್ಮಿಗಳು:
ಮದನಕುಮಾರ್ ಬೈರಪ್ಪನವರರು ಶಿವಬಸವ ನಗರದ ನಿವಾಸಿಯಾಗಿದ್ದು, ಇಂದು ಬೆಳಗ್ಗೆ 10ಗಂಟೆ ಸುಮಾರಿಗೆ ಮನೆಯಿಂದ ಕಣಬರ್ಗಿ ಬಳಿಯ ದೇವಸ್ಥಾನಕ್ಕೆ ಹೋಗುವ ಸಂದರ್ಭದಲ್ಲಿ ಕಾರಿನಲ್ಲಿ ಬಂದ ಐದಾರು ಜನರ ಗುಂಪೊಂದು ಕಣಬರ್ಗಿ ರಸ್ತೆಯಲ್ಲಿರುವ ಶೃತಿ ಅಪಾರ್ಟ್ಮೆಂಟ್ ಬಳಿ ಬಲವಂತವಾಗಿ ಅಪಹರಿಸಿಕೊಂಡು ಹೋಗಿದ್ದರು. ಈ ಸಂಬಂಧ ಮದನಕುಮಾರ್ ಕುಟುಂಬಸ್ಥರು ಮಾಳ ಮಾರುತಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ತನಿಖೆ ಕೈಗೊಂಡಿರುವ ಪೊಲೀಸರು ಅಪಹರಣಗೊಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಚುರುಕುಗೊಳಿಸಿದ್ದರು.
ಮದನಕುಮಾರ್ ಹಿನ್ನೆಲೆ:
ಬೆಳಗಾವಿಯ ನಿವಾಸಿ ಆಗಿರುವ ಮದನ್ ಕುಮಾರ್ ಬೈರಪ್ಪನವರು ಬೆಳಗಾವಿಯಲ್ಲಿ ದೊಡ್ಡ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಒಡೆತನದಲ್ಲಿ ಶೃತಿ ಕನ್ಸಟ್ರಕ್ಷನ್ಸ್ , ಶೃತಿ ಲೇಔಟ್, ಶೃತಿ ಅಪಾರ್ಟ್ಮೆಂಟ್ ಸೇರಿದಂತೆ ಇತರ ಉದ್ಯಮದಲ್ಲಿ ಗುರುತಿಸಿಕೊಂಡಿದ್ದು, ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತಮ್ಮದೇ ಆಗಿರುವ ಹೆಸರು ಮಾಡಿಕೊಂಡಿದ್ದಾರೆ.
ಓದಿ: ಬೈಕ್ ನಿಲ್ಲಿಸಿ ನದಿಗೆ ಹಾರಿದ; ಕೊಳ್ಳೇಗಾಲದಲ್ಲಿ ತಮ್ಮನ ಕಣ್ಮುಂದೆಯೇ ಅಣ್ಣನ ಆತ್ಮಹತ್ಯೆ..!