ಬೆಳಗಾವಿ: ರವಿ ಕೋಕೀತ್ಕರ್ ಮೇಲೆ ಫೈರಿಂಗ್ ಮಾಡಿರುವ ಪ್ರಕರಣದಲ್ಲಿ ಬೆಳಗಾವಿ ಪೊಲೀಸರು ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ. ಹೀಗಾಗಿ ಬೆಳಗಾವಿ ಪೊಲೀಸರ ಮೇಲೆ ನಂಬಿಕೆಯಿಲ್ಲ. ಫೈರಿಂಗ್ ಮಾಡಿರುವ ಆರೋಪಿಗಳ ವಿರುದ್ಧ ಸಡಿಲವಾದ ಮೊಕದ್ದಮೆ ಹಾಕಲಾಗಿದೆ. ಇದರ ಹಿಂದೆ ಕಾಣದ ಕೈಗಳು ಪೊಲೀಸರನ್ನು ಕೈಗೊಂಬೆ ಮಾಡಿಕೊಂಡಿವೆ. ಈ ಪ್ರಕರಣದಲ್ಲಿ ಪೊಲೀಸರು ಲೋಪ ಎಸಗಿದ್ದಾರೆ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ಈ ಪ್ರಕರಣವನ್ನೂ ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಪ್ರಯತ್ನ?:ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರವಿ ಕೋಕೀತ್ಕರ್ ಮೇಲೆ ಫೈರಿಂಗ್ ಪ್ರಕರಣದ ತನಿಖೆ ವೇಳೆ ಬೆಳಗಾವಿ ಪೊಲೀಸ್ ವಿರುದ್ಧ ಹಲವಾರು ಅನುಮಾನಗಳು ಕಂಡುಬಂದಿವೆ. ಈ ಪ್ರಕರಣವನ್ನೂ ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಪ್ರಯತ್ನಗಳು ನಡೆಯುತ್ತಿದೆ. ಆರ್ಮ್ಸ್ ಆಕ್ಟ್ ಪ್ರಕಾರ 26_27ಎ ಆಕ್ಟ್ ಅಡಿ ಪ್ರಕರಣ ದಾಖಲಿಸಬೇಕು. ಆದರೆ, ಬೆಳಗಾವಿ ಪೊಲೀಸರು ಕಲಂ 25ರಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಕಲಂ 25 ಪ್ರಕರಣದಲ್ಲಿ ಆಯುಧ ಇತ್ತು ಎಂದು ಹೇಳುತ್ತದೆ ಎಂದು ತಿಳಿಸಿದರು.
ಕಲಂ 27 ಆಯುಧ ಉಪಯೋಗಿಸಿದ್ದನ್ನು ಹೇಳುತ್ತದೆ:ಕಾನೂನಿನ ಪ್ರಕಾರ ಕಲಂ 27 ಆಯುಧವನ್ನು ಉಪಯೋಗಿಸಿದ್ದಾರೆ ಎನ್ನವುದನ್ನೂ ಹೇಳುತ್ತದೆ. ಬೆಳಗಾವಿ ಪ್ರಕರಣದಲ್ಲಿ ಪೊಲೀಸರು ಕಲಂ 25ರಲ್ಲಿ ಕೇಸ್ ದಾಖಲು ಮಾಡಿದ್ದಾರೆ. ಅಲ್ಲಿ ನಡೆದಿರುವುದು ಪ್ರಕರಣ 27 ಕಲಂಗೆ ಸಂಬಂಧಪಟ್ಟಿದ್ದು, ಆದರೆ ಬೆಳಗಾವಿ ಪೋಲಿಸರು 27ನೇ ಕಲಂ ಯಾಕೆ ಹಾಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.