ಕರ್ನಾಟಕ

karnataka

ETV Bharat / state

ಗಣೇಶೋತ್ಸವಕ್ಕೆ ಕುಂದಾನಗರಿ ಸಜ್ಜು.. ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿ ಖರೀದಿಗೆ ಮುಗಿಬಿದ್ದ ಜನ - ಪೂಜಾ ಸಾಮಗ್ರಿ ಖರೀದಿ

ಬೆಳಗಾವಿ ಮಾರುಕಟ್ಟೆ ಪ್ರದೇಶಗಳಲ್ಲಿ ನಗರ, ಜಿಲ್ಲೆ, ಪಕ್ಕದ ಮಹಾರಾಷ್ಟ್ರ ಗೋವಾ ರಾಜ್ಯಗಳಿಂದಲೂ ಆಗಮಿಸಿದ್ದ ಜನರು ಭಾನುವಾರ ಭರ್ಜರಿ ವ್ಯಾಪಾರ ಮಾಡಿದರು. ಸೋಮವಾರ ಒಂದಿಷ್ಟು ಮನೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದರೆ, ಮಂಗಳವಾರ ಮತ್ತೊಂದಿಷ್ಟು ಜನ ಪೂಜಿಸಲಿದ್ದಾರೆ.

People buy worship material in the market
ಗಣೇಶೋತ್ಸವ: ಬೆಳಗಾವಿ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿ ಖರೀದಿಗೆ ಮುಗಿ ಬಿದ್ದ ಜನ

By ETV Bharat Karnataka Team

Published : Sep 17, 2023, 9:24 PM IST

ಗಣೇಶೋತ್ಸವ: ಬೆಳಗಾವಿ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿ ಖರೀದಿಗೆ ಮುಗಿ ಬಿದ್ದ ಜನ

ಬೆಳಗಾವಿ: ಗಣಪನ ಆಗಮನಕ್ಕೆ ಕುಂದಾನಗರಿ ಸಜ್ಜಾಗಿದ್ದು, ಭರದ ಸಿದ್ಧತೆಯಲ್ಲಿ ಜನರು ತೊಡಗಿದ್ದಾರೆ. ಮಾರುಕಟ್ಟೆ ಪ್ರದೇಶಗಳಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆದಿದೆ. ಇನ್ನು, ಪೂಜಾ ಸಾಮಗ್ರಿ ಖರೀದಿಗೆ ಜನ ಅಂಗಡಿಗಳಿಗೆ ಮುಗಿ ಬಿದ್ದಿರುವುದು ಇಂದು ಕಂಡು ಬಂತು.

ಹೌದು.. ಇಡೀ ರಾಜ್ಯದಲ್ಲೇ ಬೆಳಗಾವಿಯಲ್ಲಿ ಅದ್ಧೂರಿ ಗಣೇಶೋತ್ಸವ ಆಚರಿಸಲಾಗುತ್ತದೆ‌. ಈ ಸಲ ಸೆ.18ರಂದು ಕೆಲವರು ಚೌತಿ ಆಚರಿಸುತ್ತಿದ್ದರೆ ಮತ್ತೊಂದಿಷ್ಟು ಜನ 19ರಂದು ಆಚರಿಸಲು ಮುಂದಾಗಿದ್ದಾರೆ. ಹಾಗಾಗಿ ಭಾನುವಾರ ಬೆಳಗಾವಿಯ ಗಣಪತಿ ಗಲ್ಲಿ, ಖಡೇಬಜಾರ್, ಮಾರುತಿ ಗಲ್ಲಿ, ಪಾಂಗುಳ ಗಲ್ಲಿ, ರಾಮದೇವ ಗಲ್ಲಿ, ಶನಿವಾರ ಕೂಟ, ಕಡೋಲ್ಕರ್ ಗಲ್ಲಿ, ಶಾಹಪುರ ಖಡೇಬಜಾರ್ ಸೇರಿದಂತೆ ಮತ್ತಿತರ ಮಾರುಕಟ್ಟೆ ಪ್ರದೇಶಗಳಲ್ಲಿ ನಗರ, ಜಿಲ್ಲೆ, ಪಕ್ಕದ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದಲೂ ಆಗಮಿಸಿದ್ದ ಜನರು ಭರ್ಜರಿ ವ್ಯಾಪಾರ ಮಾಡಿದರು.

ಸದಾಶಿವ ನಗರದಿಂದ ಮಾರುಕಟ್ಟೆಗೆ ಆಗಮಿಸಿದ್ದ ಗ್ರಾಹಕ ಸುರೇಶ ಕೋಣಿ ಮಾತನಾಡಿ, ಗಣೇಶನ ಹಬ್ಬಕ್ಕೆ ಹೂವು, ಹಣ್ಣು, ಸ್ವೀಟ್ಸ್ ಖರೀದಿಸಿದ್ದೇವೆ. ಮಾರ್ಕೆಟ್ ನಲ್ಲಿ ಬಹಳ ರಶ್ ಇದೆ ಎಂದರು.

ಪೂಜೆಗೆ ಬೇಕಾದ ಊದಬತ್ತಿ, ಎಣ್ಣೆ, ಕರ್ಪೂರ, ಮುತ್ತಿನಹಾರ-ತೋರಣ, ಗೆಜ್ಜೆ ವಸ್ತ್ರ, ಆಸನ, ಅಲಂಕಾರಿಕ ವಸ್ತುಗಳು, ರಂಗೋಲಿ, ಲಟಕನ್, ಪಟಾಕಿ, ಅರಿಶಿಣ, ಕುಂಕುಮ, ಸಿಂಧೂರ, ಅಷ್ಟಗಂಧ, ಬತ್ತಿ, ಜೇನುತುಪ್ಪ, ಅತ್ತರ, ಕವಡಿ ಊದು, ಧೂಪ, ಟೆಂಗಿನಕಾಯಿ ಸೇರಿ ಇನ್ನಿತರ ವಸ್ತುಗಳನ್ನು ಜನ ಖರೀದಿಸಿದರು.

ವ್ಯಾಪಾರಿ ಮಂಜಿರಿ ಆಂಬಳೆ ಮಾತನಾಡಿ, ಗಣೇಶೋತ್ಸವಕ್ಕೆ ಬೇಕಾದ ಎಲ್ಲ ರೀತಿಯ ಸಾಮಗ್ರಿ ನಮ್ಮಲ್ಲಿ ಮಾರಾಟಕ್ಕಿವೆ. ಅಲಂಕಾರಿಕ ವಸ್ತುಗಳನ್ನು ಜನ ಹೆಚ್ಚು ಕೊಳ್ಳುತ್ತಿದ್ದಾರೆ. ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ ಎಂದರು.

ಮತ್ತೋರ್ವ ವ್ಯಾಪಾರಿ ಚಂದ್ರಶೇಖರ ಸಿದ್ದನ್ನವರ ಮಾತನಾಡಿ, ಕಳೆದ ವರ್ಷಕ್ಕಿಂತ ಈ ವರ್ಷ ವ್ಯಾಪಾರ ಚೆನ್ನಾಗಿದೆ‌. ಇವತ್ತಿನಿಂದ ವ್ಯಾಪಾರ ಜೋರಾಗಿದ್ದು, ಎಲ್ಲ ರೀತಿಯ‌ ಪೂಜಾ ಸಾಮಗ್ರಿಗಳನ್ನು ಜನ ಕೊಂಡುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಗ್ರಾಹಕರನ್ನು ಆಕರ್ಷಿಸುತ್ತಿರುವ ಅಲಂಕಾರಿಕ ವಸ್ತುಗಳು: ಅಲಂಕಾರಿಕ ಹೂ ಮಾಲೆಗಳು, ಹೂವಿನ ಗುಚ್ಛ, ಬಣ್ಣದ ಹಾಳೆಗಳು, ಬಗೆ ಬಗೆಯ ರಂಗೋಲಿಗಳು, ಮಂಟಪಕ್ಕೆ ಅಲಂಕಾರ ಮಾಡುವ ಕರ್ಟನ್ಸ್‌ಗಳು, ವಿದ್ಯುತ್ ಅಲಂಕಾರಿಕ ವಸ್ತುಗಳು, ಸೌಂಡ್‌ಸಿಸ್ಟಮ್, ಸ್ಪೀಕರ್, ಎಲ್‌ಇಡಿ ಫೋಕಸ್ ಲೈಟ್, ವಿದ್ಯುತ್ ದೀಪಗಳು, ಲೇಸರ್, ಬಗೆ ಬಗೆಯ ಲೈಟ್ ಗ್ರಾಹಕರನ್ನು ಆಕರ್ಷಿಸುತ್ತಿವೆ. ಇನ್ನು ಹೊಸ ಬಟ್ಟೆಗಳನ್ನು ಖರೀದಿಸಲು ಗ್ರಾಹಕರು ಬಟ್ಟೆ ಅಂಗಡಿಗಳಿಗೆ ಲಗ್ಗೆ ಇಟ್ಟಿದ್ದರು.

ಇನ್ನು ಗಣೇಶನ ಮೂರ್ತಿ ಮುಂದೆ ಇಡಲು ಆತನಿಗೆ ಪ್ರಿಯವಾದ ಲಡ್ಡು, ಮತ್ತಿಹೂವು, ಮತ್ತಿಕಾಯಿ ಸೇರಿದಂತೆ ವಿವಿಧ ಹೂವುಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಈ ಹೂವುಗಳನ್ನು ಸೇರಿಸಿ ಒಂದು ಕಟ್ಟು ಮಾಡಿ, 30 ರೂಪಾಯಿಗೆ ಮಾರಾಟ ಮಾಡುತ್ತಿರುವುದು ಕಂಡುಬಂತು.

ಹೂವು ಹಣ್ಣುಗಳ ಭರ್ಜರಿ ವ್ಯಾಪಾರ: ಇನ್ನು ಗಣೇಶನ ಮುಂದೆ ಇಡಲು ಬಾಳೆಹಣ್ಣು, ಸೇಬು, ಚಿಕ್ಕು, ಸಿತಾಫಲ, ಮೋಸಂಬಿ ಸೇರಿ ಮತ್ತಿತರ ಹಣ್ಣುಗಳ ವ್ಯಾಪಾರ ಕೂಡ ಜೋರಾಗಿತ್ತು. ಇನ್ನು ಗ್ರಾಹಕರಿಗೆ ಅನುಕೂಲ ಆಗಲೆಂದು ಐದು ತರಹದ ಒಂದೊಂದು ಹಣ್ಣು ಸೇರಿಸಿ 150 ರೂಪಾಯಿ ದರ‌ ನಿಗದಿಪಡಿಸಿ ವ್ಯಾಪಾರಿಗಳು ಮಾರುತ್ತಿದ್ದಾರೆ. ಅದೇ ರೀತಿ ಸೇವಂತಿ, ಗುಲಾಬಿ, ಚೆಂಡು ಹೂವುಗಳನ್ನು ಜನ ಹೆಚ್ಚಾಗಿ ಖರೀದಿಸಿದರು.

ಒಟ್ಟಾರೆ ಗಣೇಶನ ಆರಾಧನೆಗೆ ಕುಂದಾನಗರಿ ಸರ್ವ ರೀತಿಯಲ್ಲಿ ಸನ್ನದ್ಧವಾಗಿದ್ದು, ಸೋಮವಾರ ಒಂದಿಷ್ಟು ಮನೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದರೆ, ನಾಡಿದ್ದು ಮತ್ತೊಂದಿಷ್ಟು ಜನ ಪೂಜಿಸಲಿದ್ದಾರೆ. ಇನ್ನು ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ನಾಡಿದ್ದು ಮಂಗಳವಾರ ನಡೆಯಲಿದೆ.

ಇದನ್ನೂಓದಿ:ಅದ್ಧೂರಿ ಗಣೇಶ ಉತ್ಸವಕ್ಕೆ ಸಿದ್ಧತೆ ಜೋರು.. ಈ ಸಲ ಕಾಂತಾರ ಗಣೇಶನಿಗೆ ಭಾರಿ ಡಿಮ್ಯಾಂಡ್​..

ABOUT THE AUTHOR

...view details