ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಸಚಿವ ಜಾರಕಿಹೊಳಿ ಧ್ವಜಾರೋಹಣ; ಕರ್ನಾಟಕ ಭಾವೈಕ್ಯತೆ ತವರು ಮನೆ ಎಂದು ಬಣ್ಣನೆ

ಕನ್ನಡ ರಾಜ್ಯೋತ್ಸವ ದಿನದಂದು ನಾವು ಸಮೃದ್ಧ ಹಾಗೂ ಬಲಿಷ್ಠ ಕರ್ನಾಟಕ ನಿರ್ಮಾಣಕ್ಕಾಗಿ ದೃಢಸಂಕಲ್ಪ ಮಾಡಬೇಕಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸಚಿವ ಸತೀಶ ಜಾರಕಿಹೊಳಿ
ಸಚಿವ ಸತೀಶ ಜಾರಕಿಹೊಳಿ

By ETV Bharat Karnataka Team

Published : Nov 1, 2023, 2:26 PM IST

Updated : Nov 1, 2023, 2:59 PM IST

ಕನ್ನಡ ರಾಜ್ಯೋತ್ಸವ ಆಚರಣೆ

ಬೆಳಗಾವಿ : ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಭುವನೇಶ್ವರಿ ದೇವಿ ಮೂರ್ತಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್​ ಜಾರಕಿಹೊಳಿ ಪೂಜೆ ಸಲ್ಲಿಸಿದರು. ಬಳಿಕ ಹಳದಿ-ಕೆಂಪು ಬಣ್ಣದ ಬಲೂನ್​ಗಳನ್ನು ಹಾರಿಸುವ ಮೂಲಕ‌ ಚಾಲನೆ ನೀಡಿ, ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಕನ್ನಡ ನಾಡು ವಿವಿಧ ಧರ್ಮ ಮತ್ತು ಸಂಸ್ಕೃತಿಗಳ ಸಂಗಮವಾಗಿದೆ. ಪ್ರಾಚೀನ ಕಾಲದಿಂದಲೂ ತನ್ನದೇ ಆದ ಭವ್ಯ ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸಿಕೊಂಡು ಬಂದಿದೆ. ಸಾಮರಸ್ಯವೇ ಕನ್ನಡ ಸಂಸ್ಕೃತಿಯ ಜೀವಾಳ. ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲು ನಾವೆಲ್ಲರೂ ಕಂಕಣ ಬದ್ಧರಾಗಬೇಕು. ಸದೃಢ, ಸಮೃದ್ಧ ಹಾಗೂ ಸ್ವಾವಲಂಬಿ ಕರ್ನಾಟಕ ನಿರ್ಮಾಣ ಮಾಡಲು ಪಣ ತೊಡೋಣ. ಕರ್ನಾಟಕವು ಸಹಬಾಳ್ವೆ, ಸೌಹಾರ್ದತೆ ಮತ್ತು ಭಾವೈಕ್ಯತೆಯ ತವರು ಮನೆ ಎಂದು ಸತೀಶ್​ ಜಾರಕಿಹೊಳಿ ಹೇಳಿದರು.

“ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ, ಹಿಂದು, ಕ್ರೈಸ್ತ್, ಮುಸಲ್ಮಾನ, ಪಾರಸಿಕ ಜೈನರುಧ್ಯಾನ...”

ರಾಷ್ಟ್ರಕವಿ ಕುವೆಂಪು ರಚಿಸಿರುವ ನಾಡಗೀತೆಯ ಈ ಸಾಲುಗಳು ಬೆಳಗಾವಿ ಜಿಲ್ಲೆಗೆ ಅಕ್ಷರಶಃ ಅನ್ವಯಿಸುತ್ತವೆ. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ನಮ್ಮ ದೇಶದ ಸಂಸ್ಕೃತಿಯು ಬೆಳಗಾವಿಯಲ್ಲಿ ನೆಲೆಸಿರುವ ವಿವಿಧ ಧರ್ಮೀಯರು ಮತ್ತು ಹಲವು ಭಾಷಿಕರ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ‌. ಸ್ವಾತಂತ್ರಂತ್ರ್ಯಕ್ಕಾಗಿ ಬ್ರಿಟಿಷರೊಡನೆ ಹೋರಾಟಕ್ಕೆ ನಾಂದಿ ಹಾಡಿದ ಕಿತ್ತೂರಿನ ರಾಣಿ ಚೆನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಮ್ಮ ನಾಡಿನವರು ಎಂಬುದು ಹೆಮ್ಮೆಯ ವಿಷಯ. ಪ್ರಪ್ರಥಮ ಮಹಿಳಾ ಸೈನ್ಯವನ್ನು ಕಟ್ಟಿದ ಬೆಳವಡಿ ಮಲ್ಲಮ್ಮ ನಮ್ಮ ನಾಡಿನ ಧೀಮಂತ ಶಕ್ತಿ ಎಂದು ಬಣ್ಣಿಸಿದರು.

ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಬೆಳಗಾವಿ ಜಿಲ್ಲೆಯಿಂದ ಹಲವಾರು ಮಹನೀಯರು ಕ್ರಿಯಾಶೀಲರಾಗಿ ಹೋರಾಡಿದ್ದು, ಡೆಪ್ಯುಟಿ ಚೆನ್ನಬಸಪ್ಪ, ಬೈಲಹೊಂಗಲದ ಗಂಗಾಧರ ತುರಮುರಿ, ಹುದಲಿಯ ಸ್ವಾತಂತ್ರ್ಯ ಯೋಧರಾದ ಗಂಗಾಧರರಾವ್ ದೇಶಪಾಂಡೆ, ಚಿಂಚಲಿಯ ರಾಷ್ಟ್ರೀಯವಾದಿ ಆರ್.ಎಸ್. ಹುಕ್ಕೇರಿ, ತ್ರಿವಿಧ ದಾಸೋಹಿ ನಾಗನೂರ ಶಿವಬಸವ ಮಹಾಸ್ವಾಮಿಗಳು, ಗೋಕಾವಿ ನಾಡಿನ ಬೆಟಗೇರಿ ಕೃಷ್ಣಶರ್ಮ, ಸವದತ್ತಿಯ ಶಂ.ಬಾ. ಜೋಶಿ, ಅಥಣಿಯ ಬಿ. ಎನ್. ದಾತಾರ, ಕುಂದರನಾಡಿನ ಅಣ್ಣೂ ಗುರೂಜಿ, ದತ್ತೋಪಂತ ಬೆಳವಿ, ಸಂಪಗಾವಿಯ ಚನ್ನಪ್ಪ ವಾಲಿ ಮೊದಲಾದವರ ಕೊಡುಗೆ ಅವಿಸ್ಮರಣೀಯ ಎಂದು ಸಚಿವ ಸತೀಶ್​ ಜಾರಕಿಹೊಳಿ ಮಹನೀಯರನ್ನು ನೆನೆದು ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡಿದರು.

ಗಮನ ಸೆಳೆದ ಪೊಲೀಸ್​ ಪಥಸಂಚಲನ

ಗಮನ ಸೆಳೆದ ಪಥಸಂಚಲನ :ಇದಕ್ಕೂ ಮೊದಲು ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆ ಪೊಲೀಸ್, ವಿದ್ಯಾರ್ಥಿಗಳು ಸೇರಿ ವಿವಿಧ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.‌ ಇದೇ ವೇಳೆ ಸಚಿವ ಸತೀಶ್​ ಜಾರಕಿಹೊಳಿ ಅವರು ಗೌರವವಂದನೆ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಕನ್ನಡಪರ ಹೋರಾಟಗಾರರು, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜಿಲ್ಲೆಯ ಒಟ್ಟು 25 ಮಹನೀಯರಿಗೆ ಜಿಲ್ಲಾಡಳಿತದ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು.

ಸಂಸದೆ ಮಂಗಲ ಅಂಗಡಿ, ಶಾಸಕರಾದ ಅಭಯ ಪಾಟೀಲ, ಆಸೀಫ್ ಸೇಠ್, ಜಿಲ್ಲಾಧಿಕಾರಿ ನಿತೇಶ್​ ಪಾಟೀಲ, ಜಿಪಂ ಸಿಇಒ ಹರ್ಷಲ್ ಭೊಯರ್, ಐಜಿಪಿ ವಿಶಾಸಕುಮಾರ ವಿಕಾಶ, ನಗರ ಪೊಲೀಸ್ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಸೇರಿ ಮತ್ತಿತರರು ಇದ್ದರು.

ಇದನ್ನೂ ಓದಿ :ಇಂದಿನಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ವಿದ್ಯುತ್, ಕುಡಿಯುವ ನೀರು ಉಚಿತ: ಸಿಎಂ ಸಿದ್ದರಾಮಯ್ಯ ಘೋಷಣೆ

Last Updated : Nov 1, 2023, 2:59 PM IST

ABOUT THE AUTHOR

...view details