ಬೆಳಗಾವಿ: ಸೂರ್ಯ-ಚಂದ್ರ ಇರುವವರೆಗೂ ಬೆಳಗಾವಿ ಜಿಲ್ಲೆಯು ಅಖಂಡ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳುವ ಮೂಲಕ ಮಹಾರಾಷ್ಟ್ರ ಸರ್ಕಾರದ ಖ್ಯಾತೆಗೆ ತಿರುಗೇಟು ಕೊಟ್ಟಿದ್ದಾರೆ.
ಕಪ್ಪು ಬಟ್ಟೆ ಧರಿಸಿಯೇ ಕರ್ತವ್ಯ ನಿರ್ವಹಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿರುವ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಡಿಸಿಎಂ ಸವದಿ, ಮಹಾರಾಷ್ಟ್ರದವರು ಏನೇ ಹೇಳಿದರೂ ನಾವು ಚಿಂತೆ ಮಾಡಲ್ಲ. ಟೀಕೆ ಟಿಪ್ಪಣಿಗಳನ್ನು ಮಾಡಲು ಹೋಗಲ್ಲ. ಮಹಾರಾಷ್ಟ್ರದವರು ಯಾರೇ ಕೂಗಾಡಲಿ, ಹಾರಾಡಲಿ, ಅದು ಅವರ ರಾಜ್ಯಕ್ಕೆ ಸೀಮಿತವಾಗಿದೆ. ಸೂರ್ಯ-ಚಂದ್ರ ಇರುವವರೆಗೆ ಬೆಳಗಾವಿ ಕರ್ನಾಟಕ ಭಾಗವಾಗಿಯೇ ಇರುತ್ತದೆ ಎಂದು ತಿಳಿಸಿದರು.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಭಾವನೆಯಿಂದಲೇ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಲಾಗಿದೆ. ಮಹಾರಾಷ್ಟ್ರದವರು ಅವರ ಕೆಲ ಸಂಘಟನೆಗಳನ್ನು ಜೀವಂತ ಇಡಲು ಈ ರೀತಿ ಹೇಳಿಕೆ ನೀಡುತ್ತಾರೆ. ನಾಳೆ ಕಪ್ಪು ದಿನ ಆಚರಿಸುವುದಾಗಿ ಮಹಾರಾಷ್ಟ್ರದವರು ಹೇಳಿದ್ದಾರೆ. ಅದನ್ನು ಕರ್ನಾಟಕದ ನೆಲದಲ್ಲಿ ನಿಂತು ಹೇಳಲಿ. ಅದಕ್ಕೆ ನಾವು ತಿರುಗೇಟು ಕೊಡುತ್ತೇವೆ ಎಂದರು.
ರಾಜಕೀಯ ಬೇಳೆ ಬೆಯಿಸಿಕೊಳ್ಳಲು ಮಹಾರಾಷ್ಟ್ರ ನಾಯಕರು ಹೀಗೆ ಮಾಡುತ್ತಲೇ ಬಂದಿದ್ದಾರೆ. ಅವರ ನೆಲದಲ್ಲಿ ಕುಳಿತು ಏನೇನೋ ಹೇಳಿಕೆ ಕೊಟ್ರೆ ನಾವೇಕೆ ತಲೆಕೆಡಿಸಿಕೊಳ್ಳಬೇಕು. ಕರ್ನಾಟಕ ಸರ್ಕಾರ ಅವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತದೆ. ನಮ್ಮ ಹಿತಾಸಕ್ತಿಯನ್ನು ನಾವು ಕಾಪಾಡುತ್ತೇವೆ ಎಂದರು.