ಬೆಳಗಾವಿ: ಕೋವಿಡ್-19 ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಬೆಳಗಾವಿ ಜಿಲ್ಲೆ ಕಿತ್ತಳೆ ವಲಯ(ಆರೇಂಜ್ ಝೋನ್)ದಲ್ಲಿ ಗುರುತಿಸಲ್ಪಟ್ಟಿರುತ್ತದೆ. ಆದ್ದರಿಂದ ಈ ವಲಯಕ್ಕೆ ಅನ್ವಯವಾಗುವ ಮಾರ್ಗಸೂಚಿ ಅನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ ಮೇ 4 ರಿಂದ ಎರಡು ವಾರಗಳ ಕಾಲ ಲಾಕ್ಡೌನ್ನ್ನು ಜಾರಿಗೊಳಿಸಲಾಗುತ್ತದೆ. ಕಿತ್ತಳೆ ವಲಯದಲ್ಲಿ ಅನುಸರಿಸಬೇಕಾದ ನಿಯಮಾವಳಿ ಪ್ರಕಾರ ಆರ್ಥಿಕ ಮತ್ತು ವಾಣಿಜ್ಯ ಚಟುವಟಿಕೆಗಳು ಮತ್ತು ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಅಂತರ್ ಜಿಲ್ಲಾ ಸಂಚಾರಕ್ಕೆ ಪಾಸ್:
ಲಾಕ್ಡೌನ್ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಿಂದ ಕರ್ನಾಟಕ ರಾಜ್ಯದ ಇತರೆ ಜಿಲ್ಲೆಗಳಿಗೆ ತೆರಳಲು ಬಯಸುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ಇತರರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದು, ಇತರೆ ಜಿಲ್ಲೆಗಳಿಗೆ ಹೋಗ ಬಯಸುವವರಿಗೆ ಒಂದು ಸಲ, ಒಂದು ದಿನ ಮತ್ತು ಒಂದು ಬಾರಿ ಸಂಚಾರಕ್ಕೆ ಪಾಸ್ ನೀಡಲಾಗುವುದು ಎಂದರು.
ಅಂತರ್ ಜಿಲ್ಲಾ ಪ್ರಯಾಣಕ್ಕೆ ಬೆಳಗಾವಿ ತಾಲ್ಲೂಕು ಹೊರತುಪಡಿಸಿ ಉಳಿದ ತಾಲ್ಲೂಕಿನ ಜನರಿಗೆ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳು ಪಾಸ್ಗಳನ್ನು ನೀಡುವರು. ಅದೇ ರೀತಿ ಬೆಳಗಾವಿ ನಗರ ಮತ್ತು ತಾಲ್ಲೂಕಿನ ಪ್ರದೇಶದಲ್ಲಿರುವ ಜನರಿಗೆ ಉಪ ಪೊಲೀಸ್ ಆಯುಕ್ತರು(ಡಿಸಿಪಿ) ಪಾಸ್ಗಳನ್ನು ನೀಡಲಿದ್ದಾರೆ.
ಇನ್ನು ಜಿಲ್ಲೆಯಲ್ಲಿರುವ ಬೇರೆ ರಾಜ್ಯದ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು ಇತರೆ ರಾಜ್ಯಗಳಿಗೆ ತೆರಳಲು ಬಯಸಿದರೆ ಕರ್ನಾಟಕ ಸರ್ಕಾರದ ಸೇವಾ ಸಿಂಧು ಯೋಜನೆಯ ವೆಬ್‌ಸೈಟ್ ಮೂಲಕ ತಮ್ಮ ಹೆಸರು, ವಿವರಗಳನ್ನು ನೋಂದಾಯಿಸಿಕೊಳ್ಳಬಹುದು.
ಇನ್ನು ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಸಲ್ಲಿಸುವ ಅರ್ಜಿಗಳನ್ನು ಪರಿಶೀಲಿಸಿದ ಬಳಿಕ ಮಾರ್ಗಸೂಚಿ ಅನುಸಾರ ಪ್ರಯಾಣಕ್ಕೆ ಸರ್ಕಾರದಿಂದ ಅನುಮತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.