ಬೆಳಗಾವಿ :ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿ ರಚಿಸಿದ್ರೆ, ತುರ್ತು ಸಂದರ್ಭದಲ್ಲಿ ಪರಿಸ್ಥಿತಿ ನಿರ್ವಹಣೆಗೆ ಅನುಕೂಲವಾಗುತ್ತದೆ. ಆದ್ದರಿಂದ ಮೂರು ದಿನಗಳಲ್ಲಿ ಸಮಿತಿಗಳನ್ನು ರಚಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಮಳೆಗಾಲ ಆರಂಭಗೊಂಡಿರುವುದರಿಂದ ಪ್ರವಾಹ, ಅತಿವೃಷ್ಟಿ ಸೇರಿ ಎಲ್ಲ ಬಗೆಯ ತುರ್ತು ಸಂದರ್ಭಗಳ ನಿರ್ವಹಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಮಿತಿ ರಚನೆಯನ್ನು ಮಾಡಿದ ಬಳಿಕ ಜಿಲ್ಲಾಡಳಿತಕ್ಕೆ ವರದಿಯನ್ನು ಸಲ್ಲಿಸಿ ದೃಢೀಕರಿಸಬೇಕು ಎಂದರು.
ಒಂದು ಲಕ್ಷ ಕ್ಯೂಸೆಕ್ ಹರಿವು ಬಂದರೆ ನೀರು ನುಗ್ಗುವಂತಹ ತೋಟದ ಮನೆಗಳು ಮತ್ತು ಗ್ರಾಮಗಳ ಪಟ್ಟಿ ತಯಾರಿಸಬೇಕು. ಕೃಷ್ಣೆಯಲ್ಲಿ ಎರಡು ಲಕ್ಷ ಕ್ಯೂಸೆಕ್ ಮೀರಿದ್ರೆ ಮಾಂಜರಿ, ಯಡೂರು, ಹಿಂಗಳಿ, ಚಂದೂರ, ಚಂದೂರ ಟೇಕ್ ಸೇರಿ ಏಳು ಗ್ರಾಮಗಳ ಮುಳುಗಡೆಯಾಗುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಯೋಜನೆ ರೂಪಿಸಲಾಗುತ್ತಿದೆ ಎಂದರು.