ಬೆಳಗಾವಿ: ತಾಲೂಕಿನ ಹಲಗಾ ಮಚ್ಚೆ ಬೈಪಾಸ್ ರಸ್ತೆ ಕಾಮಗಾರಿ ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದ ಹಿನ್ನೆಲೆ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಖುದ್ದು ಸ್ಥಳಕ್ಕೆ ಭೇಟಿ ನೀಡಿದ ವೇಳೆ ರೈತರು ತಮ್ಮ ಅಳಲು ತೋಡಿಕೊಂಡರು.
ತಾಲೂಕಿನ ಹಲಗಾ ಗ್ರಾಮದಿಂದ ಮಚ್ಚೆ ಗ್ರಾಮದವರೆಗೂ 9.5 ಕಿಮೀ ಬೈಪಾಸ್ ರಸ್ತೆ ಕಾಮಗಾರಿ ವಿವಾದ ಕಳೆದ 18 ವರ್ಷಗಳಿಂದ ಮುಂದುವರೆಯುತ್ತಲೇ ಇದೆ. ಈ ಬೈಪಾಸ್ ರಸ್ತೆ ನಿರ್ಮಾಣವಾದ್ರೇ ನಗರದಲ್ಲಿನ ಸಂಚಾರ ದಟ್ಟನೆ ಕಡಿಮೆಯಾಗುತ್ತದೆ. ಆದರೆ, ಭೂಮಿ ಕಳೆದುಕೊಂಡ ರೈತರು ಹೈಕೋರ್ಟ್ ಮೊರೆಹೋಗಿ ತಡೆಯಾಜ್ಞೆ ತಂದಿದ್ದರು, ತಡೆಯಾಜ್ಞೆ ತೆರವಿನ ಬಳಿಕ ಕಾಮಗಾರಿ ಆರಂಭಿಸಲು ಬಂದಿದ್ದ ಅಧಿಕಾರಿಗಳಿಗೆ ಅಡ್ಡಿಪಡಿಸಿ ರೈತರು ತಮ್ಮ ವಿರೋಧ ವ್ಯಕ್ತಪಡಿಸಿದ್ದರು.
ಸ್ಥಳಕ್ಕೆ ಭೇಟಿ ನೀಡಿ ರೈತರ ಕಷ್ಟ ಆಲಿಸಿದ ಡಿಸಿ ಈ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಎರಡು ದಿನಗಳ ಹಿಂದಷ್ಟೇ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ರೈತರ ಮನವಿ ಆಲಿಸಿದ್ದರು. ಜತೆಗೆ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಇಂದು ಬೆಳಗ್ಗೆ 8 ಗಂಟೆಗೆ ಮಚ್ಚೆ ಗ್ರಾಮದಿಂದ ಹಲಗಾ ಗ್ರಾಮದವರೆಗೂ ಕಾಲ್ನಡಿಗೆ ಮೂಲಕವೇ 9 ಗ್ರಾಮಗಳ ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿರುವ ರೈತರ ಕಷ್ಟ ಆಲಿಸಿದರು. ರಸ್ತೆ ಮಾಡುವ ಜಮೀನುಗಳಲ್ಲೇ ಹೊರಟಿದ್ದ ಡಿಸಿ ಆಯಾ ಜಮೀನು ಮಾಲೀಕರಿಂದ ಮನವಿ ಸ್ವೀಕರಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿ ಎಂ.ಜಿ. ಹಿರೇಮಠ, ರೈತರಿಂದ ಮನವಿ ಸ್ವೀಕರಿಸಿದ್ದು ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ. ಮಧ್ಯವರ್ತಿಗಳಿಗೆ ಭೇಟಿಯಾಗುವ ಅಗತ್ಯತೆ ರೈತರಿಗಿಲ್ಲ. ರೈತರು ಮಾಡಿದ ಆರೋಪದ ಬಗ್ಗೆ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇನೆ. ರೈತರ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದರು.