ಕರ್ನಾಟಕ

karnataka

ETV Bharat / state

ಬೆಳಗಾವಿ ಲೋಕಸಭೆ ಬೈ ಎಲೆಕ್ಷನ್ ದಿನಾಂಕ ಘೋಷಣೆ ವಿಳಂಬ... ಆಕಾಂಕ್ಷಿಗಳಲ್ಲಿ ತೀವ್ರ ನಿರಾಸೆ! - Belgaum Election Date Delay

ನಿಗದಿಯಂತೆ ಕಳೆದ ವಾರವೇ ಬೆಳಗಾವಿ ಲೋಕಸಭೆ ಉಪಚುನಾವಣೆ ದಿನಾಂಕ ಘೋಷಣೆ ಆಗಬೇಕಿತ್ತು. ಇಂದಾಗುತ್ತೆ, ನಾಳೆ ದಿನಾಂಕ ಘೋಷಣೆ ಆಗುತ್ತದೆ ಎಂದು ಆಕಾಂಕ್ಷಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ.

belgaum-byelection-date-declaration-delay
ಬೆಳಗಾವಿ

By

Published : Feb 25, 2021, 3:41 PM IST

ಬೆಳಗಾವಿ: ನಿಗದಿತ ಸಮಯ ಮುಗಿದರೂ ಬೆಳಗಾವಿ ಲೋಕಸಭೆ ಉಪಚುನಾವಣೆ ದಿನಾಂಕ ಇನ್ನೂ ಘೊಷಣೆ ಆಗಿಲ್ಲ. ಇದರಿಂದ ಆಕಾಂಕ್ಷಿಗಳು ತೀವ್ರ ನಿರಾಸೆಗೆ ಒಳಗಾಗಿದ್ದಾರೆ.

ಕೇಂದ್ರ ರೈಲ್ವೆ ಸಚಿವರಾಗಿದ್ದ ಸುರೇಶ್​ ಅಂಗಡಿ ಅವರು ಸೆ. 23ರಂದು ಮಹಾಮಾರಿ ಕೊರೊನಾಗೆ ಬಲಿಯಾಗಿದ್ದರು. ಸುರೇಶ್​​ ಅಂಗಡಿ ಅವರ ಅಕಾಲಿಕ ನಿಧನದಿಂದ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ. ನಿಗದಿಯಂತೆ ಕಳೆದ ವಾರವೇ ಲೋಕಸಭೆ ಉಪಚುನಾವಣೆ ಘೋಷಣೆ ಆಗಬೇಕಿತ್ತು. ಹಾಲಿ ಅಭ್ಯರ್ಥಿ ಮೃತನಾದರೆ ಆ ಕ್ಷೇತ್ರಕ್ಕೆ ಆರು ತಿಂಗಳೊಳಗೆ ಉಪಚುನಾವಣೆ ನಡೆಯಬೇಕು. ಉಪಚುನಾವಣೆಗಳು ಆರು ತಿಂಗಳ ಅವಧಿಯ 35 ದಿನದೊಳಗೆ ನಡೆಯಬೇಕು ಎಂಬುದು ವಾಡಿಕೆ. ಈವರೆಗೆ ನಡೆದ ಎಲ್ಲಾ ಉಪಚುನಾವಣೆಗಳು ವಾಡಿಕೆಯಂತೆ ನಡೆದುಕೊಂಡು ಬಂದಿವೆ. ಆದರೆ ಬೆಳಗಾವಿ ಸೇರಿ ರಾಜ್ಯದಲ್ಲಿ ನಡೆಯಬೇಕಿರುವ ಇನ್ನೆರಡು ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ಇನ್ನೂ ಘೋಷಣೆ ಆಗಿಲ್ಲ. ಹೀಗಾಗಿ ಬೆಳಗಾವಿ ಸೇರಿ ಇನ್ನುಳಿದ ಎರಡು ಕ್ಷೇತ್ರಗಳ ಆಕಾಂಕ್ಷಿಗಳು ನಿರಾಸೆಗೊಳಗಾಗಿದ್ದಾರೆ.

ಬಂಗಾಳ ಜೊತೆ ಬೆಳಗಾವಿ ಎಲೆಕ್ಷನ್:ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಇದೇ ವೇಳೆ ಬೆಳಗಾವಿ ಸೇರಿ ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಘೋಷಣೆ ಆಗುವ ಸಾಧ್ಯತೆ ದಟ್ಟವಾಗಿದೆ. ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ. ಅಲ್ಲದೇ, ಇತ್ತೀಚೆಗೆ ನಿಧನರಾದ ಸಿಂದಗಿಯ ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ ಅವರಿಂದ ತೆರವಾದ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ. ರಾಜ್ಯದಲ್ಲಿ ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಜೊತೆಗೆ ಸಿಂದಗಿ ಕ್ಷೇತ್ರಕ್ಕೂ ಉಪಚುನಾವಣೆ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದೆ ಎನ್ನಲಾಗುತ್ತಿದೆ.

ವಿಳಂಬಕ್ಕೆ ಕಾರಣವಾಯಿತೇ ಅಧಿವೇಶನ?

ಮಾರ್ಚ್ ತಿಂಗಳಲ್ಲಿ ರಾಜ್ಯದ ವಿಧಾನಸಭೆ ಹಾಗೂ ಸಂಸತ್ ಅಧಿವೇಶನ ನಡೆಯಲಿದೆ. ಚುನಾವಣೆ ಘೋಷಣೆ ಆದರೆ ಅಧಿವೇಶನ ಕಾರಣಕ್ಕೆ ರಾಜ್ಯ ಹಾಗೂ ರಾಷ್ಟ್ರ ನಾಯಕರು ಪ್ರಚಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಈ ಕಾರಣವೂ ಚುನಾವಣೆ ಘೋಷಣೆ ವಿಳಂಬಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ಉಪಚುನಾವಣೆಗಾಗಿ ನಾಯಕರಿಗೆ ಉಸ್ತುವಾರಿ ನೀಡಲಾಗಿದೆ. ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಬಿಜೆಪಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಜಗದೀಶ್​ ಶೆಟ್ಟರ್, ರಮೇಶ್ ಜಾರಕಿಹೊಳಿ ಹಾಗೂ ಉಮೇಶ್​ ಕತ್ತಿಗೆ ಉಸ್ತುವಾರಿ ನೀಡಲಾಗಿದೆ. ಕಾಂಗ್ರೆಸ್ ಕೂಡ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಿದೆ. ಅಧಿವೇಶನ ಇರುವ ಕಾರಣ ಪ್ರಚಾರದಲ್ಲಿ ಹಾಗೂ ಚುನಾವಣೆಯ ತಂತ್ರಗಾರಿಕೆಯಲ್ಲಿ ಪಾಲ್ಗೊಳ್ಳಲು ಆಗದಿರುವುದೇ ಚುನಾವಣೆ ಘೋಷಣೆ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ.

ಓದಿ:ಸಿದ್ದರಾಮಯ್ಯ ಅಹಿಂದ ಸಮಾವೇಶ: ಕೆ.ಎಸ್.ಈಶ್ವರಪ್ಪ ಹೇಳಿದ್ದೇನು?

ಆಕಾಂಕ್ಷಿಗಳಲ್ಲಿ ತೀವ್ರ ನಿರಾಸೆ:ನಿಗದಿಯಂತೆ ಕಳೆದ ವಾರವೇ ಬೆಳಗಾವಿ ಲೋಕಸಭೆ ಉಪಚುನಾವಣೆ ದಿನಾಂಕ ಘೋಷಣೆ ಆಗಬೇಕಿತ್ತು. ಇಂದಾಗುತ್ತೆ, ನಾಳೆ ದಿನಾಂಕ ಘೋಷಣೆ ಆಗುತ್ತದೆ ಎಂದು ಆಕಾಂಕ್ಷಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಸುರೇಶ್​ ಅಂಗಡಿ ಅವರು ನಿಧನರಾಗಿ ಐದು ತಿಂಗಳು ಪೂರ್ಣಗೊಂಡಿವೆ. ಆರು ತಿಂಗಳ ಮುಂಚೆಯೇ ಚುನಾವಣೆ ನಡೆಯಬೇಕಿದ್ದರೂ ಇನ್ನೂ ಚುನಾವಣಾ ಆಯೋಗದಿಂದ ದಿನಾಂಕ ಘೋಷಣೆ ಆಗದೇ ಇರುವುದು ಆಕಾಂಕ್ಷಿಗಳಲ್ಲಿ ತೀವ್ರ ನಿರಾಸೆಗೆ ಕಾರಣವಾಗಿದೆ. ಬಿಜೆಪಿಯಲ್ಲಿ 50ಕ್ಕೂ ಅಧಿಕ ಆಕಾಂಕ್ಷಿಗಳಿದ್ದರೆ, ಕಾಂಗ್ರೆಸ್‍ನಲ್ಲಿ ಕೂಡ ನಾಲ್ಕೈದು ಜನ ಆಕಾಂಕ್ಷಿಗಳಿದ್ದಾರೆ. ಚುನಾವಣೆ ಘೋಷಣೆ ಆಗದಿರುವುದಕ್ಕೆ ಆಕಾಂಕ್ಷಿಗಳು ತೀವ್ರ ನಿರಾಸೆಗೆ ಒಳಗಾಗಿದ್ದಾರೆ.

ABOUT THE AUTHOR

...view details