ಬೆಳಗಾವಿ: ಬೆಳಗಾವಿ ಕ್ಷೇತ್ರದ ಲೋಕಸಭೆ ಉಪಚುನಾವಣೆ ಹೊಸ್ತಿಲಲ್ಲಿ ರಮೇಶ್ ಜಾರಕಿಹೊಳಿಯವರ ಸಿಡಿ ಬಹಿರಂಗಗೊಂಡು ರಾಜೀನಾಮೆ ನೀಡಿದ್ದಾರೆ. ಚುನಾವಣೆ ಘೋಷಣೆ ಮುನ್ನವೇ ರಮೇಶ್ ಅವರಿಗೆ ಉಸ್ತುವಾರಿ ಹೊಣೆ ನೀಡಲಾಗಿತ್ತು. ಇವರ ಜೊತೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಹಾಗೂ ಉಮೇಶ್ ಕತ್ತಿಗೆ ಉಸ್ತುವಾರಿ ನೀಡಲಾಗಿತ್ತು. ಆದರೆ, ಇದೀಗ ಬೆಳಗಾವಿ ಕ್ಷೇತ್ರದ ಉಪಚುನಾವಣೆ ಹೊಣೆಯನ್ನು ಸಚಿವ ಜಗದೀಶ್ ಶೆಟ್ಟರ್ ಅವರಿಗೆ ನೀಡಲು ಬಿಜೆಪಿ ಚಿಂತನೆಯಲ್ಲಿ ತೊಡಗಿದೆ ಎಂದು ಮೂಲಗಳು ಖಚಿತ ಪಡಿಸಿವೆ.
ಕೇಂದ್ರ ಸಚಿವ ಸುರೇಶ್ ಅಂಗಡಿಯವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಏ.17ಕ್ಕೆ ಮತದಾನ ನಡೆಯಲಿದೆ. ಹೀಗಾಗಿ ಉಸ್ತುವಾರಿ ಹೊಣೆಯನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೆಗಲೇರುವ ಸಾಧ್ಯತೆ ಇದೆ. ಶೆಟ್ಟರ್ ಜೊತೆಗೆ ಡಿಸಿಎಂ ಲಕ್ಷ್ಮಣ ಸವದಿ, ಸಚಿವ ಉಮೇಶ್ ಕತ್ತಿ ಅಥವಾ ಸಿಎಂ ಪುತ್ರ ವಿಜಯೇಂದ್ರ ಹೆಸರು ಮುಂಚೂಣಿಯಲ್ಲಿದೆ. ಶೀಘ್ರವೇ ಸಭೆ ನಡೆಸಿ ಯಾರಿಗೆ ಉಸ್ತುವಾರಿ ನೀಡಬೇಕು ಎಂಬುವುದರ ಬಗ್ಗೆ ಬಿಜೆಪಿ ನಿರ್ಧರಿಸಲಿದೆ.