ಕರ್ನಾಟಕ

karnataka

ETV Bharat / state

ಬರ, ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಚರ್ಚಿಸಬೇಕು, ಧರಣಿ ಕೈಬಿಡಿ: ಪ್ರತಿಪಕ್ಷಗಳಿಗೆ ಪರಮೇಶ್ವರ್ ಮನವಿ

ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆಯನ್ನು ಖಂಡಿಸಿ ನಿನ್ನೆಯಿಂದ ನಡೆಸುತ್ತಿದ್ದ ಧರಣಿಯನ್ನು ಪ್ರತಿಪಕ್ಷದ ಬಿಜೆಪಿ, ಜೆಡಿಎಸ್ ಸದಸ್ಯರು ಸ್ಪೀಕರ್ ಮನವಿ ಮೇರೆಗೆ ಇಂದು ಹಿಂಪಡೆದರು.

Minister Dr G Parameshwar spoke in the assembly.
ವಿಧಾನಸಭೆಯಲ್ಲಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಮಾತನಾಡಿದರು.

By ETV Bharat Karnataka Team

Published : Dec 12, 2023, 10:45 PM IST

ಬೆಂಗಳೂರು / ಬೆಳಗಾವಿ:ಸಚಿವ ಜಮೀರ್ ಅಹ್ಮದ್ ಖಾನ್ ಅವರ ಹೇಳಿಕೆಯನ್ನು ವಿರೋಧಿಸಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ನಿನ್ನೆಯಿಂದ ನಡೆಸುತ್ತಿದ್ದ ಧರಣಿ ಹಿಂಪಡೆದರು.

ವಿಧಾನಸಭೆಯ ಕಲಾಪದ ಆರಂಭದಲ್ಲೇ ಪ್ರತಿಪಕ್ಷಗಳ ಶಾಸಕರು ಧರಣಿಯನ್ನು ಮುಂದುವರೆಸಿದರು. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಮಾತನಾಡಿ, ಇಡೀ ದೇಶವೇ ನಮ್ಮನ್ನು ನೋಡುತ್ತಿದೆ. ಇಲ್ಲಿ ಗಂಭೀರ ಚರ್ಚೆಗಳು ನಡೆಯಬೇಕು. ನಿನ್ನೆಯಿಂದಲೂ ಧರಣಿ ನಡೆಸುತ್ತಿದ್ದೀರಿ. ಇದರಿಂದಾಗಿ ಪ್ರಶ್ನೋತ್ತರ ಕಲಾಪ, ಶೂನ್ಯವೇಳೆ ಗಮನ ಸೆಳೆಯುವ ಸೂಚನೆ. ಶಾಸನ ರಚನೆ ಸೇರಿದಂತೆ ಮಹತ್ವದ ಕಲಾಪಗಳಲ್ಲಿ ಪ್ರತಿಪಕ್ಷಗಳ ಶಾಸಕರು ಭಾಗವಹಿಸಿರಲಿಲ್ಲ ಎಂದು ವಿಷಾದಿಸಿದರು.

ಬರದ ಮೇಲೆ ಚರ್ಚೆಯಾಗಿದೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ಚರ್ಚೆಗಳು ನಡೆಯಬೇಕಿದೆ. ಅದರಲ್ಲಿ ಅವರು ಭಾಗವಹಿಸಬೇಕು. ರಾಜ್ಯದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕಿದೆ. ಈ ನಿಟ್ಟಿನಲ್ಲಿ ಧರಣಿ ಕೈಬಿಟ್ಟು ಕಲಾಪದಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.

ಪ್ರತಿಪಕ್ಷ ನಾಯಕ ಆರ್ ಅಶೋಕ ಮಾತನಾಡಲು ಎದ್ದು ನಿಂತಾಗ, ಸ್ಪೀಕರ್ ಅವರು ಮಧ್ಯಪ್ರವೇಶಿಸಲು ಯತ್ನಿಸಿದರು. ನಮಗೂ ಮಾತನಾಡಲು ಅವಕಾಶ ನೀಡಬೇಕು. ಸ್ಪೀಕರ್ ಆಡಳಿತ ಪಕ್ಷದ ಕಡೆಗಷ್ಟೇ ನೋಡಬಾರದು, ನಮ್ಮನ್ನೂ ಗಮನಿಸಬೇಕು. ಗೃಹ ಸಚಿವರು ಮಾತನಾಡಲು ಅವಕಾಶ ಕೊಟ್ಟಿದ್ದೀರ. ನಾನು ಮಾತನಾಡಲು ಎದ್ದು ನಿಲ್ಲುತ್ತಿದ್ದಂತೆ ಮಧ್ಯಪ್ರವೇಶ ಮಾಡುವುದು ಬೇಡ ಎಂದು ಅಶೋಕ್ ಹೇಳಿದರು.

ಗೃಹಸಚಿವರು ಇದೇ ಮಾತುಗಳನ್ನು ನಿನ್ನೆಯೇ ಹೇಳಬಹುದಿತ್ತು. ಆದರೆ ನಮ್ಮನ್ನು ಸತಾಯಿಸಿ ಕಾಲಾಹರಣ ಮಾಡಲಾಗಿದೆ. ಸರ್ಕಾರದ ದೌರ್ಜನ್ಯಗಳು ಹೆಚ್ಚಾಗಿವೆ. ಕೂಗಾಡಿ ನಮ್ಮ ಗಂಟಲು ಒಣಗಿದೆ. ಸದನದ ಯಾವುದೇ ಕಲಾಪಗಳಲ್ಲೂ ಭಾಗವಹಿಸಲು ಆಗಿಲ್ಲ. ಸರ್ಕಾರ ನಿನ್ನೆ ಮಂಡಿಸಿದ ವಿವಿಧ ವಿಧೇಯಕಗಳಲ್ಲಿ ಜನರ ಮೇಲೆ 2500 ಕೋಟಿ ರೂ. ತೆರಿಗೆ ವಿಧಿಸಿದೆ. ಇದರ ಬಗ್ಗೆ ನಾವು ಪ್ರಸ್ತಾಪಿಸಬೇಕಿದೆ. ಸಂವಿಧಾನಬದ್ಧ ಸಭಾಧ್ಯಕ್ಷರ ಪೀಠಕ್ಕೆ ಅಗೌರವ ಆಗಿದೆ ಎಂಬುದಷ್ಟೇ ನಮ್ಮ ಕಳಕಳಿ. ಇದರಲ್ಲಿ ವೈಯಕ್ತಿಕ ವಿಚಾರಗಳಿಲ್ಲ ಎಂದು ಅಶೋಕ ಹೇಳಿದರು.

ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಚರ್ಚೆಯಾಗಬೇಕೆಂಬುದು ನಮ್ಮ ಕಾಳಜಿ. ಬಸನಗೌಡ ಪಾಟೀಲ್ ಯತ್ನಾಳ್ ಅವರು ಈ ಬಗ್ಗೆ ತಮ್ಮೊಂದಿಗೆ ಚರ್ಚೆ ಮಾಡಿದ್ದಾರೆ. ನಾವು ಧರಣಿ ಹಿಂಪಡೆಯುತ್ತಿದ್ದೇವೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗಳ ಕುರಿತು ಚರ್ಚೆಯನ್ನು ಆದ್ಯತೆ ಮೇರೆಗೆ ತೆಗೆದುಕೊಳ್ಳಬೇಕು. ಅಗತ್ಯವಾದರೆ ಪ್ರಶ್ನೋತ್ತರ ಸೇರಿದಂತೆ ಎಲ್ಲಾ ಕಲಾಪಗಳನ್ನೂ ಬದಿಗಿರಿಸಿ ಎಂದು ಸಲಹೆ ನೀಡಿದರು.

ಈ ವೇಳೆ ಸ್ಪೀಕರ್ ಯು.ಟಿ.ಖಾದರ್ ಅವರು ಮಾತನಾಡಿ, ಜಮೀರ್ ಅವರ ಹೇಳಿಕೆ ಬಗ್ಗೆ ಈಗಾಗಲೇ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಅದರ ಹೊರತಾಗಿಯೇ ಸರ್ಕಾರ, ವಿಪಕ್ಷಗಳು ಮತ್ತು ತನ್ನ ಪೀಠದ ಪ್ರತ್ಯೇಕ ಅಭಿಪ್ರಾಯಗಳನ್ನು ಹೊಂದಿರುವುದು ಸರಿಯಲ್ಲ. ಹೇಳಿಕೆ ನೀಡಿ ಒಂದು ತಿಂಗಳು ಕಳೆದಿವೆ. ಕಳೆದ ಒಂದು ವಾರದಿಂದ ಸದನ ಉತ್ತಮವಾಗಿ ನಡೆಯುತ್ತಿತ್ತು. ವಿಪಕ್ಷ ನಾಯಕರು ನಿನ್ನೆ ಏಕಾಏಕಿ ವಿಷಯ ಪ್ರಸ್ತಾಪಿಸಿ ಧರಣಿ ನಡೆಸುವುದು ಸರಿಯಲ್ಲ. ನಿಯಮಾನುಸಾರ ನೋಟಿಸ್ ಕೊಟ್ಟರೆ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು. ಸಭಾಧ್ಯಕ್ಷ ಪೀಠ, ಸದನ, ಶಾಸಕರ ಗೌರವ ತಿಳಿಯಬೇಕು ಎಂಬುದು ಎಲ್ಲರ ಕಾಳಜಿಯಾಗಿದೆ. ನಿಯಮಬದ್ಧವಾಗಿ ಕಾರ್ಯಕಲಾಪ ನಡೆಸುವುದು ನಮ್ಮ ಬದ್ಧತೆ ಎಂದು ಹೇಳಿದರು. ಬಳಿಕ ಪ್ರತಿಪಕ್ಷಗಳ ಸದಸ್ಯರು ಧರಣಿ ವಾಪಸ್ ಪಡೆದರು.

ಜಮ್ಮು- ಕಾಶ್ಮೀರಕ್ಕಿದ್ದ ಆರ್ಟಿಕಲ್ 370 ರದ್ದು ಪ್ರಸ್ತಾಪ:ಇದಕ್ಕೂ ಮುನ್ನ ಪ್ರತಿಪಕ್ಷದ ನಾಯಕ ಆರ್. ಅಶೋಕ ಅವರು, ಜಮ್ಮು-ಕಾಶ್ಮೀರಕ್ಕಿದ್ದ ಆರ್ಟಿಕಲ್ 370 ನ್ನು ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ನಿನ್ನೆ ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಅದಕ್ಕೆ ಅಭಿನಂದನೆ ಸಲ್ಲಿಸುವ ನಿಲುವಳಿಯನ್ನು ಮಂಡಿಸುವಂತೆ ಮನವಿ ಮಾಡಿದರು.

ವಿಧಾನಸಭೆಯ ಕಲಾಪದಲ್ಲಿ ಸ್ವಯಂಪ್ರೇರಿತವಾಗಿ ವಿಷಯ ಪ್ರಸ್ತಾಪಿಸಿದ ಅಶೋಕ ಅವರು, ಸುಪ್ರೀಂಕೋರ್ಟಿನ ತೀರ್ಪು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಒಂದೇ ದೇಶ, ಒಂದೇ ರಾಷ್ಟ್ರಧ್ವಜ ಎಂಬ ನಿಲುವನ್ನು ಎತ್ತಿಹಿಡಿದಿದೆ. ಅದಕ್ಕೆ ಅಭಿನಂದನೆ ಸಲ್ಲಿಸುವ ಸಲುವಾಗಿ ರಾಜ್ಯಸರ್ಕಾರ ಸ್ವಯಂಪ್ರೇರಿತವಾಗಿ ನಿಲುವಳಿ ಸೂಚನೆ ಮಂಡಿಸಿದರೆ ನಾವೆಲ್ಲಾ ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ಸಲಹೆ ನೀಡಿದರು. ಇರುವುದರಲ್ಲಿ ಗೃಹಸಚಿವ ಡಾ.ಜಿ.ಪರಮೇಶ್ವರ್ ಪರವಾಗಿಲ್ಲ. ಅವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಇದನ್ನೂಓದಿ:ಹಳೆ ವಾಹನಗಳ ನಂಬರ್ ಪ್ಲೇಟ್ ಬದಲಾಯಿಸಲು 2024 ಫೆಬ್ರವರಿವರೆಗೆ ಅವಕಾಶ: ಸಚಿವ ರಾಮಲಿಂಗಾ ರೆಡ್ಡಿ

ABOUT THE AUTHOR

...view details