ಬೆಳಗಾವಿಯಲ್ಲಿ ಭ್ರೂಣ ಲಿಂಗ ಪತ್ತೆ ಆರೋಪ: ಆಸ್ಪತ್ರೆ ಮೇಲೆ ಎಸಿ ನೇತೃತ್ವದಲ್ಲಿ ದಿಢೀರ್ ದಾಳಿ ಬೆಳಗಾವಿ: ಗರ್ಭಿಣಿಯರ ಭ್ರೂಣ ಪತ್ತೆ ಮಾಡುತ್ತಿದ್ದ ಆರೋಪದ ಹಿನ್ನೆಲೆ ನಿನ್ನೆ ರಾತ್ರಿ ಆಸ್ಪತ್ರೆಯೊಂದರ ಮೇಲೆ ಬೆಳಗಾವಿ ಎಸಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಸ್ಕ್ಯಾನಿಂಗ್ ರೂಮ್ ಸೀಜ್ ಮಾಡಿದ್ದಾರೆ.
ಬೆಳಗಾವಿಯ ಮಾಧವ ನಗರದಲ್ಲಿರುವ ಆಸ್ಪತ್ರೆಯಲ್ಲಿ ಕಾನೂನು ಬಾಹಿರವಾಗಿ ಗರ್ಭಿಣಿಯರ ಸ್ಕ್ಯಾನಿಂಗ್ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಗರ್ಭಧಾರಣೆ ಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆಹಚ್ಚುವ ಯಂತ್ರಗಳ ಕಾಯ್ದೆ ಉಲ್ಲಂಘನೆಯಡಿ ದಾಳಿ ಮಾಡಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ಪ್ರಸವಪೂರ್ವ ಭ್ರೂಣದ ಪತ್ತೆ ತಂತ್ರಗಳ ವಿಧಾನಗಳ ಉಪಯೋಗ ಉಲ್ಲಂಘನೆ, ಸರ್ಕಾರದ ಭ್ರೂಣ ಪತ್ತೆ ನಿಷೇಧ ನಿರ್ಧಾರ, ರೋಗಿಗಳ ರಿಜಿಸ್ಟರ್ ಪುಸ್ತಕ ನಿರ್ವಹಣೆ ಇಲ್ಲದಿರುವುದು, ಗರ್ಭಿಣಿಯರ ಸ್ಕ್ಯಾನಿಂಗ್ ಹೀಗೆ ಸರ್ಕಾರದ ಹಲವು ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾದ ಹಿನ್ನೆಲೆ ಆಸ್ಪತ್ರೆಗೆ ನೋಟಿಸ್ ನೀಡಲಾಗಿದೆ. ಒಂದು ವಾರದೊಳಗೆ ಈ ಬಗ್ಗೆ ವರದಿ ಸಲ್ಲಿಸುವಂತೆ ಎಚ್ಚರಿಸಲಾಗಿದೆ.
ಆಸ್ಪತ್ರೆಯಲ್ಲಿ ಗರ್ಭಿಣಿಯರನ್ನು ಸ್ಕ್ಯಾನಿಂಗ್ ಮಾಡುವ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೆಷಿನ್ ರೂಂ ಅನ್ನು ಅಧಿಕಾರಿಗಳು ಸೀಜ್ ಮಾಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ದಾಳಿಯಲ್ಲಿ ಬೆಳಗಾವಿ ಎಸಿ ಶ್ರವಣ ನಾಯ್ಕ, ಪ್ರೊಬೆಷನರಿ ಐಎಎಸ್ ಶುಭಂ ಶುಕ್ಲಾ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿಶ್ವನಾಥ ಎಂ. ಭೋವಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಂಜುನಾಥ ಬಿಸನಳ್ಳಿ, ಹಾಲಪ್ಪ ಒಡೆಯರ್ ಮತ್ತಿತರರು ಇದ್ದರು.
ಕಾನೂನು ಏನು ಹೇಳುತ್ತದೆ?: ಭಾರತದಲ್ಲಿ ಗರ್ಭಪೂರ್ವ ಹಾಗೂ ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವುದು ಹಾಗೂ ಹೆಣ್ಣು ಭ್ರೂಣ ಹತ್ಯೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. 1994ರಲ್ಲಿ ಪುರುಷ ಹಾಗೂ ಮಹಿಳೆಯರ ಸಮಾಜ ಅನುಪಾತವನ್ನು ಕಾಪಾಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಪ್ರಸವ ಮುನ್ನ ಭ್ರೂಣ ಲಿಂಗ ಪತ್ತೆ ಮಾಡುವ ತಂತ್ರ ದುರ್ಬಳಕೆ ಹಾಗೂ ತಡೆ ಕಾಯ್ದೆಯನ್ನು ಜಾರಿಗೆ ತಂದಿದೆ.
ಈ ಕಾಯ್ದೆಯ ಪ್ರಕಾರ ಯಾರೇ ವ್ಯಕ್ತಿ ವೈಜ್ಞಾನಿಕ ತಂತ್ರಜ್ಞಾನಗಳನ್ನು ಭ್ರೂಣದ ಲಿಂಗ ಪತ್ತೆಗೆ ಬಳಸಿದರೆ, ಲಿಂಗ ಪತ್ತೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ಗರ್ಭಿಣಿ ಮಹಿಳೆಯರ ಮೇಲೆ ಒತ್ತಡ ಹೇರಿದರೆ ಅದು ಅಪರಾಧ. ಜೊತೆಗೆ ಸ್ಕ್ಯಾನಿಂಗ್ ಸೌಲಭ್ಯ ಹೊಂದಿರುವ ಪ್ರತಿಯೊಂದು ಕೇಂದ್ರಗಳು ಕಡ್ಡಾಯವಾಗಿ ನೋಂದನೀ ಮಾಡಿಸಿಕೊಳ್ಳಬೇಕು. ಭ್ರೂಣಲಿಂಗ ಪತ್ತೆ, ಭ್ರೂಣ ಲಿಂಗ ಆಯ್ಕೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಜಾಹೀರಾತುಗಳನ್ನೂ ಈ ಕಾಯ್ದೆಯ ಪ್ರಕಾರ ಪ್ರಸಾರ ಮಾಡುವಂತಿಲ್ಲ. ಇವೆಲ್ಲವನ್ನು ಉಲ್ಲಂಘಿಸದಲ್ಲಿ ಅಂತಹವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಹತ್ತು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.
ಇದನ್ನೂ ಓದಿ:ಹೆಣ್ಣು ಭ್ರೂಣ ಪತ್ತೆ ಹಚ್ಚಿ ಗರ್ಭಪಾತ.. ಆಲೆಮನೆಯನ್ನೇ ಸ್ಕ್ಯಾನಿಂಗ್ ಸೆಂಟರ್ ಆಗಿ ಪರಿವರ್ತಿಸಿದ್ದ ನಾಲ್ವರ ಸೆರೆ