ಬೆಳಗಾವಿ:ಪಶ್ಚಿಮಘಟ್ಟ ಪ್ರದೇಶದಲ್ಲಿ ನಿರಂತರ ಮಳೆ ಹಿನ್ನೆಲೆ ಮಲಪ್ರಭಾ ನದಿಗೆ ನೀರಿನ ಒಳಹರಿವು ಹೆಚ್ಚಳವಾಗುತ್ತಿದೆ. ಪರಿಣಾಮ ಮಲಪ್ರಭಾ ನದಿ ಪಾತ್ರದ ರಾಮದುರ್ಗ ಸವದತ್ತಿ, ಮುನವಳ್ಳಿ ಗ್ರಾಮದ ರೈತರು ಪ್ರವಾಹ ಭೀತಿ ಎದುರಿಸುತ್ತಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ನವಿಲುತೀರ್ಥ ಡ್ಯಾಂನಿಂದ 12,500 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಡ್ಯಾಂನ ನಾಲ್ಕು ಗೇಟ್ಗಳ ಮೂಲಕ ನೀರು ಹೊರಕ್ಕೆ ಬಿಡುಗಡೆ ಮಾಡುತ್ತಿರುವ ಹಿನ್ನೆಲೆ ಮುನವಳ್ಳಿ-ಸವದತ್ತಿ ಸಂಪರ್ಕಿಸುವ ಕೆಳಹಂತದ ಹಳೇಯ ಸೇತುವೆ ಜಲಾವೃತವಾಗಿದೆ.
ಪಶ್ಚಿಮಘಟ್ಟ ಪ್ರದೇಶದಲ್ಲಿ ನಿರಂತರ ಮಳೆ: ನವಿಲುತೀರ್ಥ ಡ್ಯಾಂನಿಂದ 12,500 ಕ್ಯುಸೆಕ್ ನೀರು ಬಿಡುಗಡೆ ಕೆಳಹಂತದ ಸೇತುವೆ ಮುಳುಗಡೆಯಾಗಿರುವುದನ್ನು ನೋಡಲು ಜನರು ಮುಗಿಬೀಳುತ್ತಿದ್ದಾರೆ. ಹೀಗಾಗಿ ಜನರು ಅಲ್ಲಿಗೆ ಹೋಗದಂತೆ ಈಗಾಗಲೇ ಸವದತ್ತಿ ಪೊಲೀಸರು ಬ್ಯಾರಿಕೇಡ್ ಹಾಕಿ ಮುಂಜಾಗೃತ ಕ್ರಮಗಳನ್ನ ಕೈಗೊಂಡಿದ್ದಾರೆ. ಆದರೆ, ಕೆಲವರು ಬ್ಯಾರಿಕೇಡ್ ಡಾಟಿ ಸೇತುವೆ ನೋಡಲು ಹೋಗುತ್ತಿದ್ದಾರೆ.
ಇದನ್ನೂ ಓದಿ:ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರಿ ಮಳೆ : ಬೆಳಗಾವಿಯಲ್ಲಿ 17ಸೇತುವೆಗಳು, 35 ಅಧಿಕ ಮನೆಗಳ ಕುಸಿತ
ಇದಲ್ಲದೇ ರಾಮದುರ್ಗ ಪಟ್ಟಣದ ಹೊರವಲಯದ ಥೇರ್ ಬಜಾರ್‌ಗೆ ನೀರು ನುಗ್ಗಿದೆ. ಇದರಿಂದ ನಾಲ್ಕಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು, ನದಿ ತೀರದ ಬಡಾವಣೆಗಳನ್ನು ಸ್ಥಳಾಂತರ ಮಾಡುವಂತೆ ಜನರು ಒತ್ತಾಯಿಸಿದ್ದಾರೆ. ಪ್ರತಿ ಬಾರಿ ಮಳೆಯಾದ ವೇಳೆ ಇದೇ ಪರಿಸ್ಥಿತಿ ಉದ್ಭವ ಆಗುತ್ತದೆ. ಹೀಗಾಗಿ ಶಾಶ್ವತ ಪರಿಹಾರ ನೀಡುವಂತೆ ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.
ಇತ್ತ, ಖಾನಾಪುರ ತಾಲೂಕಿನಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ತಾಲೂಕಿನ ಹಬ್ಬಾನಟ್ಟಿ ಗ್ರಾಮದ ಮಾರುತಿ ಮಂದಿರ ಸಂಪೂರ್ಣವಾಗಿ ಜಲಾವೃತವಾಗಿದೆ. ಮಲಪ್ರಭಾ ನದಿ ತುಂಬಿ ಹರಿಯುತ್ತಿದೆ. ಒಂದು ತಿಂಗಳ ಅವಧಿಯಲ್ಲಿ ಈ ದೇವಸ್ತಾನ ಎರಡನೇ ಬಾರಿಗೆ ಜಲಾವೃತಗೊಂಡಿದೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಮಳೆ ಅವಾಂತರ.. ಚಲಿಸುತ್ತಿದ್ದ ಬೈಕ್ಗಳ ಮೇಲೆ ಬಿದ್ದ ಮರ, ಓರ್ವ ಸಾವು