ಬೆಳಗಾವಿ: ಯಲ್ಲಮ್ಮದೇವಿ ಉತ್ತರ ಕರ್ನಾಟಕದ ಆರಾಧ್ಯ ದೇವಿ. ಲಕ್ಷಾಂತರ ಸಂಖ್ಯೆಯ ಭಕ್ತರು ಭೇಟಿ ಕೊಡುವ ಸವದತ್ತಿ ತಾಲೂಕಿನ ಉಗರಗೋಳ ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಶನಿವಾರ ಹುಂಡಿ ಎಣಿಕೆ ಕಾರ್ಯ ನಡೆಯಿತು. 40 ದಿನಗಳ ಅವಧಿಯಲ್ಲಿ ಬರೋಬ್ಬರಿ 1.03 ಕೋಟಿ ರೂ. ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ.
ಎರಡು ಹಂತದಲ್ಲಿ ಹುಂಡಿ ಎಣಿಕೆ ಕಾರ್ಯ: ಏಳುಕೊಳ್ಳದ ಯಲ್ಲಮ್ಮ ದೇವಿಯ ದರ್ಶನಕ್ಕೆ ಕರ್ನಾಟಕ ಅಷ್ಟೇ ಅಲ್ಲದೇ, ನೆರೆಯ ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಆಗಸ್ಟ್ 17ರಿಂದ ಸೆಪ್ಟೆಂಬರ್ 25ರ ಅವಧಿಯಲ್ಲಿ ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ ಹಾಕಿರುವ ನಗದು, ಚಿನ್ನ ಮತ್ತು ಬೆಳ್ಳಿ ಆಭರಣಗಳ ಎಣಿಕೆ ಕಾರ್ಯ ಶನಿವಾರ ನಡೆಯಿತು.
ಸೆಪ್ಟೆಂಬರ್ 27ರಂದು ಮೊದಲ ಹಂತದ ಎಣಿಕೆ ನಡೆದಿತ್ತು. ನಿನ್ನೆಗೆ ಎರಡನೇ ಹಂತದ ಎಣಿಕೆ ಮುಕ್ತಾಯಗೊಂಡಿದ್ದು, ಒಟ್ಟು 1.03 ಕೋಟಿ ರೂ. ಮೌಲ್ಯದ ಕಾಣಿಕೆ ಸಂಗ್ರಹ ಆಗಿದೆ. ಈ ಪೈಕಿ 93,64,260 ರೂಪಾಯಿ ನಗದು, 7,50,600 ರೂ. ಮೌಲ್ಯದ ಚಿನ್ನಾಭರಣ ಮತ್ತು 1,87,860 ರೂಪಾಯಿ ಮೌಲ್ಯದ ಬೆಳ್ಳಿ ಆಭರಣ ಸಂಗ್ರಹವಾಗಿವೆ.
ಅಧಿಕಾರಿ ಮಾಹಿತಿ: ಯಲ್ಲಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್‍ಪಿಬಿ ಮಹೇಶ ಅವರು ಈ ಬಗ್ಗೆ ಮಾತನಾಡಿ, ಈ ಹಣವನ್ನು ಯಲ್ಲಮ್ಮನಗುಡ್ಡಕ್ಕೆ ಬರುವ ಭಕ್ತರಿಗೆ ಮೂಲಭೂತ ಸೌಲಭ್ಯಗಳಾದ ರಸ್ತೆ, ನೀರು, ಸ್ವಚ್ಛತೆ, ನೆರಳಿನ ವ್ಯವಸ್ಥೆ ಒದಗಿಸಲು ಮತ್ತು ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಬಳಸುತ್ತೇವೆ ಎಂದು ಮಾಹಿತಿ ಹಂಚಿಕೊಂಡರು.