ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿದ ಪ್ರಕರಣ : ಸಂತ್ರಸ್ತೆ ಭೇಟಿಯಾದ ಡಿಐಜಿ ಸುನೀಲ್ ಕುಮಾರ್ ಮೀನಾ ಬೆಳಗಾವಿ :ಬೆಳಗಾವಿಯಲ್ಲಿ ಮಹಿಳೆ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಡಿಐಜಿ ಸುನೀಲ್ ಕುಮಾರ್ ಮೀನಾ ಅವರು ಸಂತ್ರಸ್ತ ಮಹಿಳೆಯನ್ನು ಭೇಟಿಯಾಗಿ ಮಾತುಕತೆ ನಡೆಸಿ ಧೈರ್ಯ ತುಂಬಿದರು.
ನಗರದ ಬಿಮ್ಸ್ ಆಸ್ಪತ್ರೆಯ ಆವರಣದ ಸಖಿ ಒನ್ ಸ್ಟಾಪ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯನ್ನು ಭೇಟಿಯಾದ ಸುನೀಲ್ ಕುಮಾರ್ ಮೀನಾ ಸತತ ಎರಡೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಏನೆಲ್ಲಾ ಘಟನೆ ನಡೆಯಿತು..? ಯಾರೆಲ್ಲಾ ಇದ್ದರು..? ಪೊಲೀಸರು ಯಾವ ರೀತಿ ಸಹಾಯ ಮಾಡಿದರು..? ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು.
ಸಂತ್ರಸ್ತೆಯನ್ನು ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸುನೀಲ್ ಕುಮಾರ್ ಮೀನಾ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಸ್ಥಳ ಮಹಜರು ಸಹ ಮಾಡಿದ್ದು, ವರದಿ ಸಿದ್ದಪಡಿಸುತ್ತೇವೆ. ವರದಿ ಸಿದ್ಧಪಡಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮುಂದಿಡುತ್ತೇವೆ. ನಂತರ ಆ ವರದಿ ಆಧರಿಸಿ ಪ್ರಕರಣದ ಕುರಿತು ಆಯೋಗ ನಿರ್ಣಯ ಕೈಗೊಳ್ಳಲಿದೆ. ಈ ಪ್ರಕರಣದಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾದ ಬಗ್ಗೆ ತನಿಖೆ ಮುಂದುವರೆಸಿದ್ದೇವೆ. ಇನ್ನುಳಿದ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.
ಇದಕ್ಕೂ ಮೊದಲು ಘಟನೆ ನಡೆದ ಘಟನೆ ನಡೆದ ಗ್ರಾಮಕ್ಕೂ ಭೇಟಿ ನೀಡಿದ್ದ ಡಿಐಜಿ ಸುನೀಲ್ ಕುಮಾರ್ ಮೀನಾ ಸಂತ್ರಸ್ತೆಯ ಕುಟುಂಬಸ್ಥರು ಮತ್ತು ಗ್ರಾಮಸ್ಥರನ್ನು ಭೇಟಿಯಾಗಿ ಮಾಹಿತಿ ಪಡೆದರು. ಈ ವೇಳೆ ಡಿಸಿಪಿ ಪಿ.ವಿ ಸ್ನೇಹಾ, ಬೆಳಗಾವಿ ಎಸಿ ಶ್ರವಣಕುಮಾರ ನಾಯಿಕ ಸೇರಿದಂತೆ ಆರೋಗ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸಿಐಡಿ ತನಿಖೆ : ಈ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ್ದು, ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಸಿಐಡಿ ಡಿಐಜಿ ಸುಧೀರಕುಮಾರ ರೆಡ್ಡಿ ನೇತೃತ್ವದ ತಂಡ ಭಾನುವಾರ ರಾತ್ರಿಯೇ ಬೆಳಗಾವಿಗೆ ಬಂದು ವಾಸ್ತವ್ಯ ಹೂಡಿತ್ತು. ಬಳಿಕ ಇಂದು ಬೆಳಗ್ಗೆ ಬಿಮ್ಸ್ ಆಸ್ಪತ್ರೆಯ ಆವರಣದಲ್ಲಿರುವ ಸಖಿ ಒನ್ ಸ್ಟಾಪ್ ಸೆಂಟರ್ಗೆ ಭೇಟಿ ನೀಡಿ, ಸಂತ್ರಸ್ತ ಮಹಿಳೆಯಿಂದ ಮಾಹಿತಿ ಕಲೆ ಹಾಕಿದೆ. ಸಿಐಡಿ ಎಸ್ಪಿ ಪೃಥ್ವಿಕ್, ರಶ್ಮಿ ಪರಡ್ಡಿ ಹಾಗೂ ಡಿವೈಎಸ್‌ಪಿ ಅಂಜುಮಳ ನಾಯಕ ಸೇರಿ ಆರು ಅಧಿಕಾರಿಗಳ ತಂಡ ಈ ಪ್ರಕರಣದ ತನಿಖೆ ಆರಂಭಿಸಿದೆ.
ಇದನ್ನೂ ಓದಿ :ಬೆಳಗಾವಿ ಮಹಿಳೆ ಹಲ್ಲೆ ಪ್ರಕರಣ: ಸಿಎಂ ಇಡೀ ದೇಶದ ಮಹಿಳೆಯರ ಕ್ಷಮೆ ಕೇಳಬೇಕು: ಕೇಂದ್ರ ಬಿಜೆಪಿ ಸತ್ಯಶೋಧನಾ ಸಮಿತಿ ಆಗ್ರಹ