ಬೆಳಗಾವಿ: ವಿಧಾನಸಭೆಯಲ್ಲಿ ಇಂದು ಬೆಳಗಾವಿಯ ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್ ಮೇಲಿನ ಹಲ್ಲೆ ಪ್ರಕರಣ ಸದ್ದು ಮಾಡಿತು. ಈ ಕುರಿತು ಗೃಹ ಸಚಿವರು ಉತ್ತರ ನೀಡಬೇಕೆಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದು, ಸದನದ ಬಾವಿಗಿಳಿದು ಧರಣಿ ನಡೆಸಿದ್ದಾರೆ. ಶೂನ್ಯ ವೇಳೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಷಯ ಪ್ರಸ್ತಾಪಿಸಿದರು.
ಮನೆಯಿಂದ ಹೊರಗೆ ಕರೆತಂದು ಚಾಕುವಿನಿಂದ ಹೊಟ್ಟೆ, ಕೈ ಹಾಗು ಬೆನ್ನಿಗೆ ಇರಿದಿದ್ದಾರೆ. ಸಿಸಿಟಿವಿಯಲ್ಲಿ ಘಟನೆ ದಾಖಲಾಗಿದೆ. ಅಧಿವೇಶನದ ಸಂದರ್ಭದಲ್ಲಿ ಘಟನೆ ನಡೆದಿದ್ದು ಅಚ್ಚರಿ ತಂದಿದೆ. ಪೃಥ್ವಿ ಸಿಂಗ್ ಅವರಿಂದ ದಾಖಲೆ ಪಡೆಯಲು ನನ್ನ ಸಹಚರರು ಹೋಗಿದ್ದು ನಿಜ. ಆದರೆ ಹಲ್ಲೆಗೆ ನನಗೂ ಸಂಬಂಧ ಇಲ್ಲ. ಫೋನ್ ಮೂಲಕ ಪ್ರಥ್ವಿ ಸಿಂಗ್ಗೆ ಬೆದರಿಕೆ ಹಾಕಿದ್ದಾರೆ. ನಮ್ಮ ಒತ್ತಾಯದ ಮೇರೆಗೆ ಎಫ್ಐಆರ್ ದಾಖಲಾಗಿದೆ. ಆದರೆ ಪ್ರಮುಖ ಸೆಕ್ಷನ್ಗಳನ್ನು ಹಾಕಿಲ್ಲ. ಹಾಗಾಗಿ, ಗೃಹ ಸಚಿವರು ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸ್ಪೀಕರ್, ಗೃಹ ಸಚಿವರು ಬಂದ ಬಳಿಕ ಉತ್ತರ ಕೊಡಿಸುವ ಭರವಸೆ ನೀಡಿದರು. ಇದಕ್ಕೆ ಬಗ್ಗದ ಬಿಜೆಪಿ ಶಾಸಕರು ಉತ್ತರ ನೀಡುವಂತೆ ಒತ್ತಾಯಿಸಿದರು. ಈ ವೇಳೆ ತಾವೇ ಎದ್ದು ನಿಂತ ಸಿಎಂ ಸಿದ್ದರಾಮಯ್ಯ, ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ್ದೀರಿ. ನಾವು ಈ ವಿಷಯಕ್ಕೆ ಉತ್ತರ ಕೊಡಲ್ಲ ಅಂತ ಹೇಳಿಲ್ಲ. ಅವರು ಬಂದ ಮೇಲೆ ಕೊಡ್ತೇವೆ ಅಂದಿದ್ದೇವೆ. ಶೂನ್ಯವೇಳೆಯಲ್ಲಿ ಪ್ರಸ್ತಾಪವಾದರೆ ಸಮಯ ಇರುತ್ತೆ. ಎರಡು ದಿನದೊಳಗೆ ಉತ್ತರ ಕೊಡಬಹುದು ಎಂದು ಸ್ಪಷ್ಟಪಡಿಸಿದರು.