ಬೆಳಗಾವಿ :ಭಾರತ ದೇಶ ತನ್ನ 77ನೇ ಸ್ವಾತಂತ್ರ್ಯೋತ್ಸವದ ಸಂಭ್ರದಲ್ಲಿದೆ. ಇನ್ನೊಂದೆಡೆ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಪ್ರಮುಖ ಪಾತ್ರವಹಿದ್ದ ಬೆಳಗಾವಿ ವೀರಸೌಧದಲ್ಲಿ ಪ್ರತಿ ವರ್ಷ ಆಗಸ್ಟ್ 15ರಂದು ಬೆಳಿಗ್ಗೆ 7 ಗಂಟೆಗೆ ಸ್ವಾತಂತ್ರ್ಯೋತ್ಸವ ಆಚರಿಸಲಾಗುತ್ತದೆ. ಅಲ್ಲದೇ ಬೆಳಗಾವಿಗೆ ಬರುವ ಎಲ್ಲ ಮಹನೀಯರು ಈ ಸೌಧಕ್ಕೆ ಭೇಟಿ ನೀಡುತ್ತಾರೆ. ಏಕೆಂದರೇ ಸ್ವಾತಂತ್ರ್ಯ ಹೋರಾಟದಲ್ಲಿ ಬೆಳಗಾವಿ ಇತಿಹಾಸ ತನ್ನದೇಯಾದ ಛಾಪು ಮೂಡಿಸಿದೆ.
ಹೌದು, ಸ್ವಾತಂತ್ರ್ಯ ಹೋರಾಟದಲ್ಲಿ ಬೆಳಗಾವಿ ಮಣ್ಣಿಗೆ ವಿಶೇಷ ನಂಟಿದ್ದು, ಹಲವು ಬಲಿದಾನಗಳಿಗೆ ಸಾಕ್ಷಿಯಾಗಿದೆ. ಪ್ರಮುಖವಾಗಿ 1924ರಲ್ಲಿ ಇಂದಿನ ಟಿಳಕವಾಡಿಯ ಅಂದಿನ ವಿಜಯನಗರದ ಈ ಸ್ಥಳದಲ್ಲಿಯೇ 39ನೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆ ವಹಿಸಿಕೊಂಡ ಮೊದಲ ಮತ್ತು ಏಕೈಕ ಅಧಿವೇಶನ ಎಂಬ ಹೆಗ್ಗಳಿಕೆಯೂ ಈ ಸ್ಥಳಕ್ಕಿದೆ. ಅಧಿವೇಶನಕ್ಕೆ ಸಾಕ್ಷಿಯಾದ ನೆಲದಲ್ಲಿ ಈಗ ವೀರಸೌಧ ನಿರ್ಮಿಸಲಾಗಿದ್ದು, 2002ರಲ್ಲಿ ಸ್ಮಾರಕವಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಅಧಿವೇಶನಕ್ಕೆ ಆಗಮಿಸುವ ಜನರಿಗಾಗಿ ಅಂದು ಬೆಳಗಾವಿಯಲ್ಲೇ ತಾತ್ಕಾಲಿಕ ರೈಲು ನಿಲ್ದಾಣ ಕೂಡ ನಿರ್ಮಿಸಲಾಗಿತ್ತು.
ಸ್ವಾತಂತ್ರ್ಯ ಯೋಧ ಆರ್.ಎಚ್.ಕುಲಕರ್ಣಿ ನೇತೃತ್ವದಲ್ಲಿ ಹಲವು ಸೇನಾನಿಗಳೇ ಇದಕ್ಕೆ ಸೌಧದ ರೂಪ ಕೊಟ್ಟಿದ್ದಾರೆ. ಇಲ್ಲಿನ ಮಹಾತ್ಮಾ ಗಾಂಧಿ ಪ್ರತಿಮೆ ಹಾಗೂ ದಿಗ್ಗಜ ನಾಯಕರ ಉಬ್ಬುಚಿತ್ರಗಳು ಆಕರ್ಷಿಸುತ್ತಿವೆ. ಅತ್ಯಂತ ವಿರಳವಾದ, ಐತಿಹಾಸಿಕ ಕ್ಷಣದ ಹಲವು ಫೋಟೊಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಅಧಿವೇಶನಕ್ಕೆ ಆಗಮಿಸಿದ್ದ ಹೋರಾಟಗಾರರಿಗೆ ಕುಡಿಯುವ ನೀರಿಗಾಗಿ ಬಾವಿ ತೋಡಲಾಗಿತ್ತು. ಅದು ‘ಕಾಂಗ್ರೆಸ್ ಬಾವಿ’ ಎಂದೇ ಪ್ರಸಿದ್ಧವಾಗಿದ್ದು, ಈಗಲೂ ಅಂದಿನ ಹೋರಾಟಕ್ಕೆ ಈ ಬಾವಿ ಸಾಕ್ಷಿಯಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಗುವವರೆಗೂ, ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯಬಾರದು ಎನ್ನುವ ನಿರ್ಣಯ ಅಂಗೀಕರಿಸಿದ್ದು ಕೂಡ ಇಲ್ಲಿನ ನಡೆದ ಅಧಿವೇಶನದಲ್ಲಿ ಎನ್ನುವುದು ಮತ್ತೊಂದು ವಿಶೇಷ.
ಬೆಳಗಾವಿಗೆ ಬಂದಿದ್ದ ದಿಗ್ಗಜ ನಾಯಕರು :ಗಾಂಧೀಜಿ ಅವರಿಂದ ‘ಕರ್ನಾಟಕದ ಸಿಂಹ’ ಎಂದೇ ಕರೆಯಿಸಿಕೊಂಡ ಹುದಲಿ ಗ್ರಾಮದ ಗಂಗಾಧರರಾವ್ ದೇಶಪಾಂಡೆಯವರ ಪ್ರಯತ್ನದ ಫಲವಾಗಿ ಅಧಿವೇಶನ ಯಶಸ್ವಿಯಾಗಿ ನಡೆದಿತ್ತು. ಮೋತಿಲಾಲ್ ನೆಹರು, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ, ಮೌಲಾನಾ ಅಬುಲ್ ಕಲಾಂ ಆಜಾದ್, ಮೌಲಾನಾ ಶೌಕತ್‌ಅಲಿ, ಸರೋಜಿನಿ ನಾಯ್ಡು, ಲಾಲಾ ಲಜಪತ ರಾಯ್ ಸೇರಿದಂತೆ ಘಟಾನುಘಟಿ ನಾಯಕರು ಸಮಾವೇಶಕ್ಕೆ ಆಗಮಿಸಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಶಕ್ತಿ ತುಂಬಿದ್ದರು.