ಬೆಳಗಾವಿ: 25 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಬೆಳಗಾವಿ ವಿಭಾಗದ ವಾಣಿಜ್ಯ ತೆರಿಗೆ ಜಂಟಿ ಆಯುಕ್ತೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ದಾಕ್ಷಾಯಿಣಿ ಚೌಶೆಟ್ಟಿ ಎಂಬವರು ತನಿಖಾಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಅಧಿಕಾರಿ.
ಬೆಳಗಾವಿಯ ಆಟೊ ನಗರದಲ್ಲಿರುವ ವಿಕಾಸ ಕಂಪೋಸಿಟ್ಸ್ ಕಂಪನಿಯಿಂದ ಪೂರೈಸಲಾದ ಸಾಮಗ್ರಿಗಳಿಗೆ ಸಂಬಂಧಿಸಿದಂತೆ, ಸಿ ಫಾರ್ಮ್ ಸ್ಟೇಟ್ ಜಿಎಸ್‌ಟಿ ಸಲ್ಲಿಸಿದ ಬಳಿಕ, 41 ಸಾವಿರ ರೂ ಮರಳಿ ಪಡೆಯಲು ದಾಕ್ಷಾಯಣಿ ಚೌಶೆಟ್ಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಕಂಪನಿ ಮ್ಯಾನೇಜರ್ ವಿಕಾಸ್ ಕೋಕಣೆ ಅವರು ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು. ಇಂದು ಮಧ್ಯಾಹ್ನ ಬೆಳಗಾವಿಯ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು, ಆಯುಕ್ತೆಯನ್ನು ಬಂಧಿಸಿದ್ದಾರೆ. ಲೋಕಾಯುಕ್ತ ಎಸ್ಪಿ ಹನುಮಂತರಾಯ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ನಿರಂಜನ ಪಾಟೀಲ ನೇತೃತ್ವದಲ್ಲಿ ದಾಳಿ ನಡೆದಿದೆ.
ಮಹಿಳಾ ಉದ್ಯಮಿಗೆ ₹74 ಲಕ್ಷ ವಂಚನೆ:ಪರಿಸರಸ್ನೇಹಿ ಕೈಚೀಲ ತಯಾರಿಸುವ ಯಂತ್ರ ನೀಡುವ ಭರವಸೆ ನೀಡಿ, ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ ಬರುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಮಹಿಳಾ ಉದ್ಯಮಿಗೆ 74 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎನ್ವಿ ಗ್ರೀನ್ ಬಯೋಟೆಕ್ ಇಂಡಿಯಾ ಪ್ರೈವೇಟ್ ಲಿಮಿಡೆಟ್ ವ್ಯವಸ್ಥಾಪಕ ನಿರ್ದೇಶಕ ಅಶ್ವಥ್ ಹೆಗ್ಡೆ ವಿರುದ್ಧ ಮಹಿಳಾ ಉದ್ಯಮಿ ನೀಲಿಮಾ ಎಂಬವರು ನೀಡಿದ ದೂರು ಆಧರಿಸಿ ವಂಚನೆಯಡಿ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಚಿಕ್ಕಮಗಳೂರಿನ ಅಶ್ವಥ್, ಕಳೆದ ಐದು ವರ್ಷಗಳ ಹಿಂದೆ ನೀಲಿಮಾ ಎಂಬವರನ್ನು ಪರಿಚಯಿಸಿಕೊಂಡಿದ್ದನು. ತಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸಬಹುದು ಎಂದು ಹೇಳಿದ್ದಲ್ಲದೆ, ಪರಿಸರ ಸ್ನೇಹಿಯಾಗಿರುವ ಬಿಸಿ ನೀರಿನಲ್ಲಿ ಕರಗಿ ಹೋಗುವ ಪ್ಲಾಸ್ಟಿಕ್ ಕೈಚೀಲ ಯಂತ್ರ ಖರೀದಿಸಬೇಕು. ಇದಕ್ಕೆ ಕಚ್ಚಾ ಸಾಮಗ್ರಿ ಹಾಗೂ ನುರಿತ ಕಾರ್ಮಿಕರು ಕಂಪನಿ ನೀಡಲಿದ್ದು. ಇದಕ್ಕೆ ಹಣ ಹೂಡಿಕೆ ಮಾಡಬೇಕು ಎಂದು ಮಹಿಳೆಗೆ ಆಮಿಷವೊಡ್ಡಿ ಸುಮಾರು 74 ಲಕ್ಷ ರೂ ಹಣ ಪಡೆದುಕೊಂಡಿದ್ದರು.
ಇದನ್ನೂಓದಿ:ಹುಲಿ ಉಗುರು ಮಾದರಿ ಪೆಂಡೆಂಟ್ ಧರಿಸಿದ್ದ ಫೋಟೋ ವೈರಲ್: ಹುಬ್ಬಳ್ಳಿ ಕಾಂಗ್ರೆಸ್ ಮುಖಂಡನ ಸ್ಪಷ್ಟನೆ ಹೀಗಿದೆ