ಬೆಳಗಾವಿ:ಕುಟುಂಬದಿಂದ ದೂರ ಉಳಿದು ಗಡಿಯಲ್ಲಿ ನಿಂತು ದೇಶದ ರಕ್ಷಣೆಯ ಹೊಣೆ ಹೊತ್ತಿರುವ ಸೈನಿಕರಿಗೆ ರಕ್ಷಾಬಂಧನದ ಪ್ರಯುಕ್ತ ರಾಖಿ ಕಳುಹಿಸಲಾಗಿದೆ. ಸಹೋದರತ್ವ ಸಾರುವ ರಕ್ಷಾಬಂಧನಕ್ಕೆ ಬೆಳಗಾವಿಯ ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು ಧಾನ್ಯಗಳಿಂದ ಪರಿಸರ ಸ್ನೇಹಿ ರಾಖಿ ಹಾಗೂ ಬಣ್ಣ ಬಣ್ಣದ ಗ್ರೀಟಿಂಗ್ಸ್ ತಯಾರಿಸಿ ಕಳುಹಿಸಿದ್ದಾರೆ.
ಇದೇ ಆಗಸ್ಟ್ 3ರಂದು ರಕ್ಷಾಬಂಧನ ಹಬ್ಬವಿದ್ದು, ಈಗಾಗಲೇ ದೇಶದ ಗಡಿಗೆ ಸ್ಪೀಡ್ ಪೋಸ್ಟ್ ಮೂಲಕ ರಾಖಿ ಹಾಗೂ ಗ್ರೀಟಿಂಗ್ ರವಾನಿಸಿದ್ದಾರೆ. ಹುಬ್ಬಳ್ಳಿಯ ದೇಶಪಾಂಡೆ ಪ್ರತಿಷ್ಠಾನದ ಲೀಡರ್ಸ್ ಸೆಲ್ನಲ್ಲಿರುವ ನಗರದ ಹಲವು ಕಾಲೇಜಿನ ವಿದ್ಯಾರ್ಥಿನಿಯರು ರಾಖಿಹಬ್ಬ ಹಾಗೂ ಸ್ವಾತಂತ್ರ್ಯೋತ್ಸವಕ್ಕೆ ವಿಶೇಷ ಶುಭಾಶಯ ಕೋರಲು ಅಣಿಯಾಗಿದ್ದಾರೆ.
ಈ ರಾಖಿಗಳನ್ನು ವಿಶೇಷವಾಗಿ ಹೆಸರುಕಾಳು, ಕಡಲೆ, ಅವರೆಕಾಳು, ಗೋಧಿ, ಸೌತೆಕಾಯಿ ಹಾಗೂ ಗೋವಿನಜೋಳ, ಸೋಯಾಬಿನ್, ಮಡಕೆಕಾಳು, ಅಲಸಂದಿ, ಅಕ್ಕಿ, ಭತ್ತ ಹಾಗೂ ತುಳಸಿ ಬೀಜಗಳಿಂದ ಆಕರ್ಷಕವಾಗಿ ತಯಾರಿಸಿದ್ದಾರೆ. ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ 2 ಸಾವಿರಕ್ಕೂ ಅಧಿಕ ರಾಖಿ ಹಾಗೂ ಗ್ರೀಟಿಂಗ್ ತಯಾರಿಸಿ ಗಡಿಗೆ ರವಾನಿಸಲಾಗಿದೆ.