ಬೆಳಗಾವಿ: ಕೈಗಾರಿಕೋದ್ಯಮದ ಶಕ್ತಿ ಕೇಂದ್ರ, ಅತೀ ಹೆಚ್ಚು ನೇಕಾರರನ್ನು ಹೊಂದಿರುವ, ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ಕಪಿಲೇಶ್ವರ ಮಂದಿರ ಇರುವ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಚುನಾವಣಾ ಅಖಾಡ ಸಿದ್ಧಗೊಂಡಿದ್ದು, ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಬೆಳಗಾವಿ ದಕ್ಷಿಣ ಸದ್ಯ ಬಿಜೆಪಿ ವಶದಲ್ಲಿದ್ದು, ಶಾಸಕ ಅಭಯ ಪಾಟೀಲ್ ಮತ್ತೆ ಗೆದ್ದು ಬೀಗುವ ವಿಶ್ವಾಸದಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಭಾವತಿ ಮಾಸ್ತಮರಡಿ ಸ್ಪರ್ಧಿಸಿದ್ದರೆ, ಎಂಇಎಸ್ ನಿಂದ ರಮಾಕಾಂತ ಕೊಂಡೂಸ್ಕರ್, ಜೆಡಿಎಸ್ ಅಭ್ಯರ್ಥಿಯಾಗಿ ಕನ್ನಡ ಹೋರಾಟಗಾರ ಶ್ರೀನಿವಾಸ ತಾಳೂಕರ ಕಣದಲ್ಲಿದ್ದಾರೆ.
ರಾಜಕೀಯ ವಿಶೇಷಕರ ಅಭಿಪ್ರಾಯವೇನು?: "ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿರುವ ಶಾಸಕ ಅಭಯ ಪಾಟೀಲ್ ಅವರನ್ನು ಈ ಬಾರಿ ಹೇಗಾದರೂ ಮಾಡಿ ಸೋಲಿಸಲೇಬೇಕೆಂದು ಪಣ ತೊಟ್ಟಿರುವ ವಿರೋಧಿಗಳು, ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ಅದರಲ್ಲೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕೂಡ ರಣತಂತ್ರ ಹೆಣೆದಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ತಕ್ಕ ಮಟ್ಟಿಗೆ ಸಂಘಟಿಸಿದ್ದಾರೆ. ಇನ್ನು ಅತಿ ಹೆಚ್ಚು ಮರಾಠಾ ಮತಗಳಿರುವ ಹಿನ್ನೆಲೆ ಎಂಇಎಸ್ನಿಂದ ಸ್ಪರ್ಧಿಸಿರುವ ಮರಾಠಾ ಸಮುದಾಯದ ರಮಾಕಾಂತ ಕೊಂಡೂಸ್ಕರ್ ಅಭಯ ಪಾಟೀಲ್ ಅವರಿಗೆ ಪೈಪೋಟಿ ನೀಡುತ್ತಿದ್ದಾರೆ. ಕಡೆ ಘಳಿಗೆಯಲ್ಲಿ ಎಂಇಎಸ್, ಕಾಂಗ್ರೆಸ್ ಒಂದಾಗಿ ಚುನಾವಣೆ ಮಾಡಿದರೆ ಮಾತ್ರ ಅಭಯ ಪಾಟೀಲ್ ಅವರಿಗೆ ಹಿನ್ನೆಡೆಯಾಗುವ ಸಾಧ್ಯತೆ ಇದೆ" ಎಂಬುದು ರಾಜಕೀಯ ಚಿಂತಕರ ವಿಶ್ಲೇಷಣೆ.
ಕ್ಷೇತ್ರದ ಹಿನ್ನೆಲೆ:2008ರಲ್ಲಿ ರಚನೆಯಾಗಿರುವ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಅಭಯ ಪಾಟೀಲ್ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ 2013ರಲ್ಲಿ ಎಂಇಎಸ್ನಿಂದ ಸ್ಪರ್ಧಿಸಿದ್ದ ಸಂಭಾಜಿ ಪಾಟೀಲ ಗೆದ್ದಿದ್ದರು. 2018ರಲ್ಲಿ ಮತ್ತೆ ಅಭಯ ಪಾಟೀಲ್ ಶಾಸಕರಾಗುವ ಮೂಲಕ ಈ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿ ಮಾರ್ಪಾಡಾಗಿದೆ.
ಕ್ಷೇತ್ರದ ವಿಶೇಷತೆ:ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕಪಿಲೇಶ್ವರ ಮಂದಿರ, ಭಾರತೀಯ ಸೈನ್ಯಕ್ಕೆ ಅತ್ಯುತ್ತಮ ಸೈನಿಕರನ್ನು ಕೊಡುತ್ತಿರುವ ಮರಾಠಾ ಲಘು ಪದಾತಿ ದಳ, ಐತಿಹಾಸಿಕ ಸೇಂಟ್ ಮೇರಿ ಚರ್ಚ್ ಇರುವುದು ಇದೇ ದಕ್ಷಿಣ ಕ್ಷೇತ್ರದಲ್ಲಿ. ಇನ್ನು ಶಹಾಪುರ, ವಡಗಾವಿಯಲ್ಲಿ ಅತಿ ಹೆಚ್ಚು ನೇಕಾರರಿದ್ದು, ನೇಕಾರಿಕೆ ಇಲ್ಲಿನ ಜನರ ಕುಲಕಸುಬು. ಅದೇ ರೀತಿ ಉದ್ಯಮ ವಿಭಾಗದಲ್ಲಿ ಬಹಳಷ್ಟು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿದ್ದು, ಬೆಳಗಾವಿ ನಗರ ಮತ್ತು ಸುತ್ತಲಿನ ಗ್ರಾಮಗಳ ಸಾವಿರಾರು ಯುವಕರಿಗೆ ಉದ್ಯೋಗ ಅವಕಾಶಗಳು ಸಿಗುವಂತಾಗಿದೆ.