ಬೆಳಗಾವಿ: ಬೆಂಗಳೂರಿನ ಸ್ಯಾಂಕಿ ಕೆರೆ ಬಳಿ ಇರುವ ಶಿವಾಜಿ ಪುತ್ಥಳಿಗೆ ಅವಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ತಡರಾತ್ರಿ ಬೆಳಗಾವಿಯಲ್ಲಿ ಹಿಂದೂಪರ ಸಂಘಟನೆಗಳು ದಿಢೀರ್ ಪ್ರತಿಭಟನೆ ನಡೆಸಿದ್ದವು. ಈ ವೇಳೆ ಪೊಲೀಸರ ಮೇಲೆ ಮತ್ತು ಪೊಲೀಸ್ ವಾಹನಗಳು ಸೇರಿದಂತೆ ನಗರದ ಕೆಲವು ವಾಹನಗಳ ಮೇಲೆ ಕೆಲ ಪುಂಡರು ಕಲ್ಲು ತೂರಾಟ ನಡೆಸಿದ್ದರು. ಅಷ್ಟೇ ಅಲ್ಲದೇ ಸಂಗೊಳ್ಳಿ ರಾಯಣ್ಣ ವಿಗ್ರಹವನ್ನು ಕೆಡವಿ ಅಟ್ಟಹಾಸ ಮೆರೆದಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಂಇಎಸ್ ಮುಖಂಡ ಮತ್ತು ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆ ಅಧ್ಯಕ್ಷ ಸೇರಿ 27 ಜನರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಶುಭಂ ಶೆಳ್ಕೆ ಸೇರಿ 27 ಜನರನ್ನು ಜೈಲಿಗಟ್ಟಿದ ಖಾಕಿ ಪಡೆ ತಡರಾತ್ರಿ ಬೆಳಗಾವಿಯ ಸಂಭಾಜಿ ವೃತ್ತದಲ್ಲಿ ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆ ಅಧ್ಯಕ್ಷ ರಮಾಕಾಂತ್ ಕೊಂಡುಸ್ಕರ್ ಸೇರಿದಂತೆ ನೂರಾರು ಪ್ರತಿಭಟನಾಕಾರರು ಜಮಾವಣೆಗೊಂಡು, ಪ್ರತಿಭಟನೆ ನಡೆಸುತ್ತಿದ್ದು, ತಪ್ಪಿತಸ್ಥರನ್ನ ಬಂಧಿಸುವಂತೆ ಆಗ್ರಹಿಸುತ್ತಿದ್ದರು. ಪ್ರತಿಭಟನೆಯಲ್ಲಿ ಎಂಇಎಸ್ ಮುಖಂಡ ಶುಭಂ ಶೆಳ್ಕೆ ಮತ್ತು ಮಾಜಿ ಮೇಯರ್ ಸರಿತಾ ಪಾಟೀಲ ಸೇರಿ ಎಂಇಎಸ್ ಪುಂಡರು ಪ್ರತಿಭಟನೆಗೆ ಸಾಥ್ ನೀಡಿದ್ದರು ಎನ್ನಲಾಗ್ತಿದೆ.
ಓದಿ:ಸಂಗೊಳ್ಳಿ ರಾಯಣ್ಣನ ಪ್ರತಿಮೆ ಕೆಡವಿದ ಕಿಡಿಗೇಡಿಗಳು: ಕನ್ನಡಪರ ಹೋರಾಟಗಾರರಿಂದ ಪ್ರತಿಭಟನೆ
ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಎಂಇಎಸ್ ಪುಂಡರು ಉದ್ಧಟತನ ಪ್ರದರ್ಶಿಸಿದ್ದರು. ಬೆಳಗಾವಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಳ್ಳುತ್ತಿದ್ದಂತೆ ಡಿಸಿಪಿ ವಿಕ್ರಂ ಆಮಟೆ ಸ್ಥಳಕ್ಕೆ ಆಗಮಿಸುತ್ತಿದ್ದರು. ಈ ಸುದ್ದಿ ತಿಳಿದ ಪುಂಡರು ಪೊಲೀಸ್ ವಾಹನದ ಮೇಲೂ ಕಲ್ಲು ತೂರಿ ಅಟ್ಟಹಾಸ ಮರೆದಿದ್ದರು. ಅಷ್ಟೇ ಅಲ್ಲದೇ ಇಂದು ಮುಂಜಾನೆ 3 ಗಂಟೆಗೆ ಸಂಗೊಳ್ಳಿ ರಾಯಣ್ಣನ ವಿಗ್ರಹ ಕೆಡವಿದ್ದರು.
ಈ ಘಟನೆ ಕುರಿತು ಮೂರು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿತ್ತು. ರಾತ್ರೋರಾತ್ರಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಎಂಇಎಸ್ ಮುಖಂಡ ಶುಭಂ ಶೆಳ್ಕೆ ಮತ್ತು ರಮಾಕಾಂತ್ ಕೊಂಡುಸ್ಕರ್ ಸೇರಿದಂತೆ 27ಕ್ಕೂ ಹೆಚ್ಚು ಎಂಇಎಸ್ ಪುಂಡರನ್ನು ಬಂಧಿಸಿ ತಡರಾತ್ರಿ ಜಡ್ಜ್ ಎದುರು ಹಾಜರುಪಡಿಸಿದ್ದರು. ಬಳಿಕ 27 ಜನರನ್ನು ಬಂಧಿಸಿದ ಪೊಲೀಸರು ಹಿಂಡಲಗಾ ಜೈಲಿಗಟ್ಟಿದ್ದಾರೆ.
ಕುಂದಾನಗರಿಯಲ್ಲಿ ನಿಷೇಧಾಜ್ಞೆ :ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚಿರುವುದು ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಪ್ರಕರಣ ಖಂಡಿಸಿ ವಿವಿಧ ಸಂಘಟನೆಗಳ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಪೊಲೀಸ್ ಇಲಾಖೆ ಅವಕಾಶ ನಿರಾಕರಿಸಿದೆ. ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಡಿಸಿಪಿ ವಿಕ್ರಮ್ ಆಮಟೆ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ನಿನ್ನೆ ರಾತ್ರಿ ಬೆಂಗಳೂರು ಶಿವಾಜಿ ನಗರದಲ್ಲಿ ಶಿವಾಜಿ ಪ್ರತಿಮೆಗೆ ಅಪಮಾನ ಮಾಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ರು. ಪ್ರತಿಭಟನೆ ಬಳಿಕ ವಾಪಾಸ್ ತೆರಳುವ ವೇಳೆ ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಪೊಲೀಸ್ ವಾಹನವೊಂದಕ್ಕೆ ಬೆಂಕಿ ಹಚ್ಚಲು ಯತ್ನಿಸಿದ್ದರು ಎಂದು ಈಟಿವಿ ಭಾರತಕ್ಕೆ ಡಿಸಿಪಿ ವಿಕ್ರಂ ಅಮಟೆ ಹೇಳಿದ್ದಾರೆ.
ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಹಾನಿ ಸಂಬಂಧ ದೂರು ನೀಡಿದ್ದಾರೆ. ಈ ಘಟನೆ ಬಗ್ಗೆ ಈಗಾಗಲೇ ತನಿಖೆ ಕೈಗೊಳ್ಳಲಾಗಿದೆ. ಭಾಷಾ ಸಾಮರಸ್ಯ ಕದಡುವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಸಿಪಿ ತಿಳಿಸಿದ್ದಾರೆ.
ಗಲಭೆ ಮಾಡಿದವರ ವಿರುದ್ಧ ಒಟ್ಟು ನಾಲ್ಕ ಪ್ರಕರಣಗಳು ದಾಖಲಾಗಿವೆ. ಐಪಿಸಿ 333, 335 ಸೇರಿ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ 27 ಜನರನ್ನು ವಶಕ್ಕೆ ಪಡೆದು ತನಿಖೆ ಮಾಡಲಾಗುತ್ತಿದೆ.
ಇಂದಿನಿಂದ ನಾಳೆ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿದೆ. ನಾಲ್ಕು ಜನಕ್ಕಿಂತ ಹೆಚ್ಚು ಮಂದಿ ಗುಂಪು ಗುಂಪಾಗಿ ಓಡಾಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕುತ್ತಿದ್ದಾರೆ. ಅಂತಹವರ ಬಗ್ಗೆ ದೂರು ಬಂದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ನಿಯೋಜನೆ ಮಾಡಲಾಗುತ್ತೆ. ಕಾನೂನು ಸುವ್ಯವಸ್ಥೆ ಕಾಪಾಡುವರ ಮೇಲೆ ದಾಳಿ ಮಾಡಿದ್ದಾರೆ. ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕಾನೂನನ್ನು ಕೈಗೆ ತಗೆದುಕೊಂಡರೆ ಯಾವುದೇ ಸಂಘಟನೆ ಇರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಳಗಾವಿಯಲ್ಲಿ ಡಿಸಿಪಿ ವಿಕ್ರಂ ಅಮಟೆ ಪುಂಡರಿಗೆ ಖಡಕ್ ಆಗಿಯೇ ಎಚ್ಚರಿಕೆ ನೀಡಿದ್ದಾರೆ.